ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣದ ಮೋಹ ಹೆಚ್ಚಿರುವ ಈ ಕಾಲದಲ್ಲೂ ಪ್ರಾಮಾಣಿಕತೆಗೆ ಮಾದರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ಅಚಾನಕ್‌ವಾಗಿ ಸುಮಾರು 10 ಕೋಟಿ ರೂ. ಜಮೆಯಾಗಿದ್ದರೂ, ಅದನ್ನು ಬಳಸಲು ನಿರಾಕರಿಸಿರುವುದು ಎಲ್ಲರ ಗಮನ ಸೆಳೆದಿದೆ.
ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ರೀಟಾ ಎಂಬವರು ಕೃಷಿ ಜೀವನ ನಡೆಸುತ್ತಿದ್ದರು. ನವರಾತ್ರಿ ಸಂದರ್ಭದಲ್ಲಿ ಬ್ಯಾಂಕ್‌ಗೆ ತೆರಳಿದಾಗ ಶಾಖೆ ಮುಚ್ಚಿದ್ದರಿಂದ, ಅವರು ಎಟಿಎಂನಲ್ಲಿ ಬ್ಯಾಲೆನ್ಸ್ ಪರಿಶೀಲಿಸಿದರು. ಈ ವೇಳೆ ಅವರ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಸುಮಾರು 9.99 ಕೋಟಿ ರೂ. ಕಾಣಿಸಿಕೊಂಡಿದ್ದು ಅವರನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ:
ಅವರು ಮತ್ತೊಮ್ಮೆ ಪರಿಶೀಲಿಸಿ ವಿಡಿಯೋ ದಾಖಲಿಸಿಕೊಂಡರೂ, ಹಣವನ್ನು ಬಳಸಲು ಮುಂದಾಗಲಿಲ್ಲ. ಇದು ನಮ್ಮದಲ್ಲ ಎಂದು ಕುಟುಂಬಕ್ಕೂ ತಿಳಿಸಿ, ಹಣ ಮುಟ್ಟಬಾರದೆಂದು ಸೂಚಿಸಿದರು.
ನಂತರ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಶಾಖೆ ತೆರೆಯುತ್ತಿದ್ದಂತೆ ವಿಚಾರಣೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಬ್ಯಾಂಕ್ ಭರವಸೆ ನೀಡಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೀಟಾ ಅವರ ಪ್ರಾಮಾಣಿಕತೆ ಎಲ್ಲೆಡೆ ಪ್ರಶಂಸೆ ಪಡೆಯುತ್ತಿದೆ.



