Thursday, January 1, 2026

ನಿದ್ದೆಯ ಮಂಪರಿನಲ್ಲಿದ್ದವರಿಗೆ ಆಘಾತ! ಜಮ್ಮು-ಕಾಶ್ಮೀರದಲ್ಲಿ ಪ್ರಬಲ ಭೂಕಂಪನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷಾಚರಣೆಯ ಸಂಭ್ರಮ ಶುರವಾಗಿದ್ದಷ್ಟೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಜನವರಿ 1ರ ಮುಂಜಾನೆ 4:42ರ ಸುಮಾರಿಗೆ ಭೂಮಿ ನಡುಗಿದ ಪರಿಣಾಮ, ಕಾಶ್ಮೀರ ಕಣಿವೆ ಹಾಗೂ ಹಿಮಾಚಲ ಪ್ರದೇಶದ ಗಡಿ ಭಾಗಗಳಲ್ಲಿ ಕಂಪನಗಳು ಸ್ಪಷ್ಟವಾಗಿ ಅನುಭವವಾಗಿವೆ. ನಿದ್ರೆಯಲ್ಲಿದ್ದ ಜನರು ಅಚಾನಕ್ ಎಚ್ಚರಗೊಂಡು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.0 ಆಗಿತ್ತು. ಭೂಕಂಪದ ಕೇಂದ್ರಬಿಂದು ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಬಳಿ ಇದ್ದು, ನೆಲದೊಳಗೆ ಸುಮಾರು 5 ಕಿಲೋಮೀಟರ್ ಆಳದಲ್ಲಿ ಕಂಪನ ಉಂಟಾಗಿದೆ ಎಂದು ತಿಳಿಸಲಾಗಿದೆ.

ಬೆಳಗಿನ ಜಾವದ ನಿಶ್ಚಲತೆಯಲ್ಲಿ ಕಂಪನಗಳು ಸ್ಪಷ್ಟವಾಗಿ ಅನುಭವವಾದ ಕಾರಣ ಜನರಲ್ಲಿ ಭಯ ಹೆಚ್ಚಾಗಿದ್ದು, ತೀವ್ರ ಚಳಿ ಮತ್ತು ಶೂನ್ಯಕ್ಕಿಂತ ಕಡಿಮೆ ತಾಪಮಾನ ಇದ್ದರೂ ಸಹ ನಿವಾಸಿಗಳು ಹೊದಿಕೆ ಸುತ್ತಿಕೊಂಡು ಮನೆಗಳಿಂದ ಹೊರಬಂದು ಸುರಕ್ಷಿತ ಸ್ಥಳಗಳಲ್ಲಿ ನಿಂತಿದ್ದರು. ಕೆಲವೇ ಸೆಕೆಂಡುಗಳ ಕಾಲ ಭೂಕಂಪ ನಡೆದರೂ, ಮತ್ತೆ ಕಂಪನವಾಗಬಹುದೆಂಬ ಆತಂಕದಿಂದ ಜನರು ಮನೆಗೆ ಮರಳಲು ಹಿಂಜರಿದಿದ್ದಾರೆ.

ಆಡಳಿತದ ಮೂಲಗಳ ಪ್ರಕಾರ, ಈವರೆಗೆ ಯಾವುದೇ ಜೀವಹಾನಿ ಅಥವಾ ಆಸ್ತಿ ನಷ್ಟದ ವರದಿ ಲಭ್ಯವಾಗಿಲ್ಲ. ಕಾಶ್ಮೀರದ ಹಲವು ಭಾಗಗಳು ಹಾಗೂ ಹಿಮಾಚಲದ ಗಡಿ ಪ್ರದೇಶಗಳಲ್ಲಿ ಕಂಪನ ಅನುಭವವಾದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!