ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ–ಸೌತ್ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ವಿಶಿಷ್ಟ ಸಂಭ್ರಮದ ಕ್ಷಣ ಒದಗಿತು. ಸೌತ್ ಆಫ್ರಿಕಾ ತಂಡ 159 ರನ್‌ಗಳಿಗೆ ಆಲೌಟ್ ಆದ ನಂತರ ಭಾರತ ಮೊದಲ ಇನಿಂಗ್ಸ್ ಆರಂಭಿಸಿದ್ದು, ಈ ಹಂತದಲ್ಲೇ ಕೆಎಲ್ ರಾಹುಲ್ ತಮ್ಮ ಟೆಸ್ಟ್ ಕರಿಯರ್‌ನ ಪ್ರಮುಖ ಸಾಧನೆಯನ್ನು ದಾಖಲಿಸಿದರು. ಮೊದಲ ಇನಿಂಗ್ಸ್‌ನಲ್ಲಿ 19 ರನ್ ಗಳಿಸಿದ ರಾಹುಲ್, ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್‌ಗಳನ್ನು ಪೂರೈಸಿ ಭಾರತದ 18ನೇ ಬ್ಯಾಟರ್ ಎಂಬ ಗೌರವ ಪಡೆದಿದ್ದಾರೆ.
11 ವರ್ಷಗಳ ಹಿಂದೆ ಟೆಸ್ಟ್ ಪಾದಾರ್ಪಣೆ ಮಾಡಿದ ರಾಹುಲ್, ಈ ಸಾಧನೆ ಮುಟ್ಟಲು ಒಟ್ಟು 3977 ದಿನಗಳನ್ನು ತೆಗೆದುಕೊಂಡಿದ್ದಾರೆ. ಭಾರತದ ಬ್ಯಾಟರ್‌ಗಳಲ್ಲಿ 4000 ರನ್ ಮಾಡಲು ದೀರ್ಘಾವಧಿ ತೆಗೆದುಕೊಂಡವರ ಪಟ್ಟಿಯಲ್ಲಿ ಅವರು ಈಗ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನ ಮೊಹಿಂದರ್ ಅಮರನಾಥ್ ಇದ್ದಾರೆ. ಅವರು ಈ ಸಾಧನೆ ಮಾಡಲು 6214 ದಿನಗಳನ್ನು ತೆಗೆದುಕೊಂಡಿದ್ದರು.
ಇಂದಿನವರೆಗೆ 66 ಟೆಸ್ಟ್ ಪಂದ್ಯಗಳಲ್ಲಿ 115 ಇನಿಂಗ್ಸ್ ಆಡಿರುವ ರಾಹುಲ್, 7679 ಎಸೆತಗಳನ್ನು ಎದುರಿಸಿ 4011 ರನ್‌ಗಳನ್ನು ಸಂಗ್ರಹಿಸಿದ್ದಾರೆ. ಅವರ ಖಾತೆಯಲ್ಲಿ 11 ಶತಕಗಳು ಮತ್ತು 20 ಅರ್ಧಶತಕಗಳು ದಾಖಲಾಗಿದ್ದು, ಟೀಮ್ ಇಂಡಿಯಾಗೆ ಹಲವು ಮಹತ್ವದ ಪಂದ್ಯಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ.

