Friday, January 9, 2026

ಬೌಂಡರಿ-ಸಿಕ್ಸರ್‌ಗಳ ಸುರಿಮಳೆ: 15 ಎಸೆತಗಳಲ್ಲಿ ಫಿಫ್ಟಿ ಸಿಡಿಸಿ ಇತಿಹಾಸ ಬರೆದ ಸರ್ಫರಾಜ್ ಖಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಜೈಪುರದಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ, ಈ ಟೂರ್ನಿಯ ಇತಿಹಾಸದಲ್ಲೇ ಅತಿ ವೇಗದ ಫಿಫ್ಟಿ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಂಜಾಬ್ ನೀಡಿದ 216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಜ್, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ವಿಶೇಷವಾಗಿ ಅಭಿಷೇಕ್ ಶರ್ಮಾ ಎಸೆದ ಓವರ್‌ನಲ್ಲಿ ಸರ್ಫರಾಜ್ 3 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ ಒಟ್ಟು 30 ರನ್ ಚಚ್ಚಿದರು. ಇದಕ್ಕೂ ಮುನ್ನ ಹರ್‌ಪ್ರೀತ್ ಬ್ರಾರ್ ಓವರ್‌ನಲ್ಲೂ 19 ರನ್ ಕಲೆಹಾಕಿದ್ದರು.

ಒಟ್ಟು ರನ್: 62 (ಕೇವಲ 20 ಎಸೆತಗಳಲ್ಲಿ)

ಬೌಂಡರಿಗಳು: 7 ಬೌಂಡರಿ, 5 ಸಿಕ್ಸರ್

ದಾಖಲೆ: ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ವೇಗದ ಅರ್ಧಶತಕ (15 ಎಸೆತ).

ಟೂರ್ನಿಯ ಸಾಧನೆ: 5 ಇನ್ನಿಂಗ್ಸ್‌ಗಳಲ್ಲಿ 80ಕ್ಕೂ ಹೆಚ್ಚು ಸರಾಸರಿಯಲ್ಲಿ ಒಟ್ಟು 303 ರನ್.

ಒಂದೆಡೆ ಸರ್ಫರಾಜ್ ಅಬ್ಬರಿಸುತ್ತಿದ್ದರೆ, ಪಂಜಾಬ್ ತಂಡದ ಅಭಿಷೇಕ್ ಶರ್ಮಾ ಬ್ಯಾಟಿಂಗ್‌ನಲ್ಲಿ (8 ರನ್) ವೈಫಲ್ಯ ಅನುಭವಿಸಿದರು. ಪಂಜಾಬ್ ಪರ ಅನ್ಮೋಲ್‌ಪ್ರೀತ್ ಸಿಂಗ್ (57) ಮತ್ತು ರಮಣದೀಪ್ ಸಿಂಗ್ (72) ಅವರ ಜವಾಬ್ದಾರಿಯುತ ಆಟದಿಂದ ತಂಡ 200ರ ಗಡಿ ದಾಟಿತು. ಸರ್ಫರಾಜ್ ಖಾನ್ ಅವರ ಸ್ಫೋಟಕ ಇನ್ನಿಂಗ್ಸ್ ನಡುವೆಯೂ, ಮುಂಬೈ ತಂಡವು ಅಂತಿಮವಾಗಿ 1 ರನ್‌ನಿಂದ ಪಂಜಾಬ್ ವಿರುದ್ಧ ಸೋಲೊಪ್ಪಿಕೊಂಡಿತು.

error: Content is protected !!