ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಇತಿಹಾಸದಲ್ಲೇ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿರುವ ‘ಗಿಲ್ಲಿ’ ಖ್ಯಾತಿಯ ನಟ, ತಮ್ಮ ಹುಟ್ಟೂರು ಮಳವಳ್ಳಿಯ ದಡದಪುರಕ್ಕೆ ಭೇಟಿ ನೀಡಿದ ವೇಳೆ ಅಭಿಮಾನಿಗಳಿಂದ ರಾಜಾತಿಥ್ಯ ಸಿಕ್ಕಿದೆ. ಸುಮಾರು 50 ಲಕ್ಷ ರೂ. ನಗದು, ಒಂದು ಕಾರು ಹಾಗೂ ಕಿಚ್ಚ ಸುದೀಪ್ ನೀಡಿದ 10 ಲಕ್ಷ ರೂ. ವಿಶೇಷ ಬಹುಮಾನದೊಂದಿಗೆ ಬಂದ ಮಣ್ಣಿನ ಮಗನನ್ನು ಬರಮಾಡಿಕೊಳ್ಳಲು ಇಡೀ ಗ್ರಾಮವೇ ಸಂಭ್ರಮ ಸಡಗರದಲ್ಲಿ ಮುಳುಗಿತ್ತು.
ತಮ್ಮ ನೆಚ್ಚಿನ ನಟನ ಸ್ವಾಗತಕ್ಕಾಗಿ ಅಭಿಮಾನಿಗಳು ಮೊದಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಮಂಡ್ಯದ ಪ್ರಸಿದ್ಧ ದಂಡಿನ ಮಾರಮ್ಮ ದೇವಸ್ಥಾನದಿಂದ ದಡದಪುರದವರೆಗೆ ಬರೋಬ್ಬರಿ 7 ಕಿಲೋಮೀಟರ್‌ಗಳಷ್ಟು ಉದ್ದದ ಬೃಹತ್ ರೋಡ್ ಶೋ ನಡೆಯಿತು. ತೆರೆದ ವಾಹನದಲ್ಲಿ ಕನ್ನಡ ಬಾವುಟ ಹಿಡಿದು ಸಾಗಿದ ಗಿಲ್ಲಿಗೆ, ದಾರಿಯುದ್ದಕ್ಕೂ ಹೂವಿನ ಹಾರ, ಕನ್ನಡದ ಶಾಲು ಮತ್ತು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಜೈಕಾರಗಳ ನಡುವೆ ಸಾಗಿದ ಮೆರವಣಿಗೆಯಲ್ಲಿ ಅಭಿಮಾನಿಗಳ ಪ್ರೀತಿಯನ್ನು ಕಂಡು ಭಾವುಕರಾದ ಗಿಲ್ಲಿ ನಟ, ಅಲ್ಲಲ್ಲಿ ವಾಹನ ನಿಲ್ಲಿಸಿ ಜನರಿಗೆ ಕೈಮುಗಿದು ಧನ್ಯವಾದ ಅರ್ಪಿಸಿದರು. “ಇಷ್ಟೊಂದು ಪ್ರೀತಿ ನೋಡಿ ನಿಜಕ್ಕೂ ಸಂತೋಷವಾಗುತ್ತಿದೆ” ಎಂದ ಅವರು, “ಟಕರೆ ಟಕರೆ ಟಮ್ಟೆ ಏಟು.. ಮಳವಳ್ಳಿ ಜನ ಅಲ್ಟಿಮೇಟು” ಎನ್ನುವ ಮಾಸ್ ಡೈಲಾಗ್ ಹೊಡೆಯುವ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದರು.


