ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಪತ್ನಿ ಕಲ್ಪನಾ ಸೊರೆನ್ ಶನಿವಾರ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
ಬಳಿಕ ಮಾತನಾಡಿದ ಕಲ್ಪನಾ ಸೊರೆನ್, ಎರಡು ತಿಂಗಳ ಹಿಂದೆ ಜಾರ್ಖಂಡ್‌ನಲ್ಲಿ ಏನಾಯಿತೋ, ಅದೇ ಘಟನೆ ಈಗ ದೆಹಲಿಯಲ್ಲಿ ಪುನರಾವರ್ತನೆಯಾಗಿದೆ. ಸುನೀತಾ ಕೇಜ್ರಿವಾಲ್ ಜೊತೆ ತಮ್ಮ ನೋವು ಹಂಚಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಒಗ್ಗಟ್ಟಾಗಿ ಹೋರಾಟ ನಡೆಸಲಿದ್ದೇವೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸಹ ಭೇಟಿ ಮಾಡಲಿದ್ದೇವೆ ಎಂದು ಹೇಳಿದರು.
ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಕೋರ್ಟ್ ಇಡಿ ಕಸ್ಟಡಿಯನ್ನು ಏಪ್ರಿಲ್ 1 ರವರೆಗೆ ವಿಸ್ತರಿಸಿದೆ.
ಕೇಜ್ರಿವಾಲ್ ಬಂಧನದ ವಿರುದ್ಧ ಹೋರಾಡಲು ಸುನೀತಾ ಕೇಜ್ರಿವಾಲ್ ಅವರು ‘ಕೇಜ್ರಿವಾಲ್ ಕೋ ಆಶೀರ್ವಾದ್’ ಎಂಬ ವಾಟ್ಸಾಪ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಇತ್ತ, ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಎರಡು ತಿಂಗಳ ಹಿಂದೆ ಇಡಿ ಬಂಧಿಸಿತ್ತು, ಆದರೆ ಬಂಧನಕ್ಕೂ ಮುನ್ನ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.