ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಟ್‌ಫೀಲ್ಡ್‌ನಲ್ಲಿ ಇತ್ತೀಚೆಗೆ ನಡೆದ ಆರು ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯಾಂಶಗಳು ಹೊರಬಂದಿವೆ. ತಾಯಿ ಮೇಲಿನ ಕೋಪಕ್ಕೆ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದ್ದ ಆರೋಪಿ ಯೂಸೂಫ್, ಹತ್ಯೆಗೂ ಮುನ್ನ ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ.
ಪಶ್ಚಿಮ ಬಂಗಾಳ ಮೂಲದ ಯೂಸೂಫ್ ಎಂಬಾತ ಬಾಲಕಿಯ ತಾಯಿಯೊಂದಿಗೆ ಜಗಳವಾಡಿದ್ದ. ಈ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಈತ, ಮಗುವಿಗೆ ಚಾಕೋಲೇಟ್ ಆಮಿಷ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸಲು ಮಗುವಿನ ಶವವನ್ನು ಸಮೀಪದ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದ.
ಕೃತ್ಯ ಎಸಗಿದ ಬಳಿಕ ತನ್ನ ತವರು ರಾಜ್ಯವಾದ ಪಶ್ಚಿಮ ಬಂಗಾಳಕ್ಕೆ ಓಡಿಹೋಗಿದ್ದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ವೈಟ್‌ಫೀಲ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲಿಂದ ಆತನನ್ನು ಬೆಂಗಳೂರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತನ್ನ ಕಾಮದ ಹಸಿವು ಮತ್ತು ಸೇಡಿನ ಕೆಂಡಕ್ಕೆ ಹಸುಗೂಸನ್ನು ಬಲಿಪಡೆದ ಕರಾಳ ಸತ್ಯವನ್ನು ಆತ ಒಪ್ಪಿಕೊಂಡಿದ್ದಾನೆ.
ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ಆತನ ವಿರುದ್ಧ ಕೊಲೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

