ಇಂದು ನಾಡಿನೆಲ್ಲೆಡೆ ರಕ್ಷಾಬಂಧನ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ತಮ್ಮ ಸಹೋದರರಿಗೆ ಸಹೋದರಿಯರು ಸದಾ ರಕ್ಷಿಸುವಂತೆ, ಸದಾ ರಕ್ಷಣೆ ಮಾಡುತ್ತೇನೆ ಎಂದು ಹೇಳುತ್ತಾ ದಾರವೊಂದನ್ನು ಕಟ್ಟುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರೂ ಹಬ್ಬದ ಆಚರಣೆ ಮಾಡೋದನ್ನು, ಗಿಫ್ಟ್ ಪಡೆದುಕೊಳ್ಳೋದನ್ನು ನೋಡಿಯೇ ಇದ್ದೇವೆ. ಆದರೆ ಈ ರಕ್ಷಾಬಂಧನ ಆರಂಭವಾಗಿದ್ದು ಹೇಗೆ? ಇದಕ್ಕೆ ಇರುವ ಹಿನ್ನೆಲೆ ಏನು? ಈ ಮೂರು ಕಥೆಗಳನ್ನು ಓದಿ, ಮಕ್ಕಳಿಗೂ ಹಬ್ಬದ ಮಹತ್ವವನ್ನು ತಿಳಿಸಿ.

ಮೊದಲ ಕಥೆ
ಮಹಾಭಾರತದ ಕಥೆಯ ಪ್ರಕಾರ ಭಗವಾನ್ ಶ್ರೀ ಕೃಷ್ಣನು ತನ್ನ ವಿಷ್ಣು ಚಕ್ರ ಪ್ರಯೋಗಿಸುವಾಗ ಅಥವಾ ಗಾಳಿಪಟ ಹಾರಿಸುವಾಗ ತನ್ನ ಕೈ ಬೆರಳ ತುದಿಯಲ್ಲಿ ಗಾಯವಾಗಿ ರಕ್ತ ಬರುತ್ತದೆ. ಈ ವೇಳೆ ಅಲ್ಲಿಯೇ ಇದ್ದ ಪಾಂಡವರ ಪತ್ನಿ ದ್ರೌಪದಿ ರಕ್ತವನ್ನು ನೋಡಿ ತನ್ನ ಸೀರೆಯ ಸೆರಗಿನ ತುದಿಯನ್ನು ಕತ್ತರಿಸಿ ಕೃಷ್ಣನ ಕೈಗೆ ಕಟ್ಟುತ್ತಾರೆ. ಇದರಿಂದ ರಕ್ತ ಸುರಿಯುವುದು ನಿಲ್ಲುತ್ತದೆ. ಆ ಸಂದರ್ಭದಲ್ಲಿ ದ್ರೌಪದಿಯ ಕಾಳಜಿಯನ್ನು ನೋಡಿ ಶ್ರೀಕೃಷ್ಣನು ಭಾವುಕನಾಗುತ್ತಾನೆ. ದ್ರೌಪದಿಯನ್ನು ತನ್ನ ಸಹೋದರಿಯ ರೂಪದಲ್ಲಿ ಸ್ವೀಕರಿಸಿ ನಿನಗೆ ಕಷ್ಟ ಬಂದಾಗ, ನಿಮ್ಮ ರಕ್ಷಣೆ ಮಾಡುವ ಸಂದರ್ಭ ಬಂದಾಗ ನಾನು ಹಾಜರಾಗುತ್ತೇನೆ ಎಂದು ವಚನ ನೀಡುತ್ತಾನೆ. ಅಂತೆಯೇ ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನಹರಣ ಮಾಡುವಾಗ ಕೃಷ್ಣನು ಆಕೆಯ ಸಹಾಯಕ್ಕೆ ಬರುತ್ತಾನೆ.

ಎರಡನೆಯ ಕಥೆ
ಬಲಿ ಚಕ್ರವರ್ತಿ ಒಬ್ಬ ಶಕ್ತಿವಂತ ರಾಜ. ಆತ ವಿಷ್ಣು ದೇವರ ಆರಾಧಕ. ತನ್ನ ಶಕ್ತಿಯಿಂದ ಮೂರು ಲೋಕಗಳನ್ನು ಗೆದ್ದಿರುತ್ತಾನೆ. ದೇವತೆಗಳ ಕೋರಿಕೆಯ ಮೇರೆಗೆ ಭಗವಾನ್ ವಿಷ್ಣು ವಾಮನ ಅವತಾರವನ್ನು ತಾಳಿ ಬಲಿ ಚಕ್ರವರ್ತಿಯಿಂದ ಮೂರು ಹೆಜ್ಜೆ ಭೂಮಿಯನ್ನು ದಾನ ಕೇಳುತ್ತಾನೆ. ಒಂದು ಹೆಜ್ಜೆ ಭೂಮಿ, ಒಂದು ಹೆಜ್ಜೆಯ ಆಕಾಶದ ನಂತರ ಮೂರನೇ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ಇಡುತ್ತಾನೆ. ಆನಂತರ ಬಲಿ ಚಕ್ರವರ್ತಿಯನ್ನು ಪಾತಾಳ ಲೋಕದ ರಾಜನನ್ನಾಗಿ ಮಾಡುತ್ತಾನೆ. ಆದರೆ ಹೊರಡುವಾಗ ಬಲಿ ಚಕ್ರವರ್ತಿ ಭಗವಾನ್ ವಿಷ್ಣುವು ಸದಾ ನನ್ನ ಕಣ್ಣುದುರೇ ಇರಬೇಕು. ಪಾತಾಳದ ನನ್ನ ಅರಮನೆಯನ್ನು ಕಾಯಬೇಕು ಎಂದು ಕೇಳುತ್ತಾನೆ. ಇದಕ್ಕೆ ವಿಷ್ಣುವು ಒಪ್ಪಿಕೊಂಡು ಪಾತಾಳ ಲೋಕದ ದ್ವಾರಪಾಲಕನಾಗುತ್ತಾನೆ. ವೈಕುಂಠದಲ್ಲಿರುವ ಲಕ್ಷ್ಮೀದೇವಿಗೆ ತನ್ನ ಪತಿ ಪಾತಾಳ ಲೋಕದಲ್ಲಿರುವುದು ಬೇಸರ ತರುತ್ತದೆ. ಉಪಾಯದಿಂದ ಲಕ್ಷ್ಮೀ ದೇವಿ ಬಡಮಹಿಳೆಯಂತೆ ವೇಷ ಧರಿಸಿ ಪಾತಾಳ ಲೋಕಕ್ಕೆ ಆಗಮಿಸಿ ಬಲಿ ಚಕ್ರವರ್ತಿ ಬಳಿ ಆಶ್ರಯ ನೀಡುವಂತೆ ಮನವಿ ಮಾಡುತ್ತಾಳೆ. ಆಶ್ರಯ ನೀಡಿದ ನಂತರದಿಂದ ಬಲಿಯ ರಾಜ್ಯದಲ್ಲಿ ಸುಖ, ಶಾಂತಿ ನೆಮ್ಮದಿ ತುಂಬಿರುತ್ತದೆ. ತದನಂತರ ಲಕ್ಷ್ಮೀ ದೇವಿಯ ನೂಲೊಂದನ್ನು ಬಲಿ ಚಕ್ರವರ್ತಿಗೆ ಕಟ್ಟುತ್ತಾಳೆ. ಆಗ ಬಲಿಯು ಪ್ರೀತಿಯ ಸಹೋದರಿಗೆ ಏನು ಬೇಕು ಎಂದು ಕೇಳುತ್ತಾನೆ. ಆಗ ಲಕ್ಷ್ಮೀದೇವಿ ತನ್ನ ನಿಜರೂಪ ತೋರಿಸಿ ತನ್ನ ಪತಿಯನ್ನು ವೈಕುಂಠಕ್ಕೆ ಕಳಿಸುವಂತೆ ಕೋರುತ್ತಾಳೆ. ಇದಕ್ಕೆ ಬಲಿ ಒಪ್ಪಿಗೆ ನೀಡಿ ತಂಗಿಗಾಗಿ ತನ್ನ ಪ್ರೀತಿಯ ದೈವವನ್ನೇ ತ್ಯಾಗ ಮಾಡುತ್ತಾನೆ.

ಮೂರನೆಯ ಕಥೆ
ಭವಿಷ್ಯ ಪುರಾಣ ಕಥೆಯ ಪ್ರಕಾರ ದೇವರು ಹಾಗೂ ದುಷ್ಟಶಕ್ತಿಗಳ ನಡುವೆ ಮಹಾನ್ ಯುದ್ಧ ನಡೆಯುತ್ತಿರುತ್ತದೆ. ಈ ವೇಳೆ ಇಂದ್ರದೇವ ಯುದ್ಧವನ್ನು ಸೋಲುವ ಹಂತಕ್ಕೆ ಬಂದಿರುತ್ತಾರೆ. ಆಗ ಅವರ ಪತ್ನಿ ಇಂದ್ರಾಣಿ ಇಂದ್ರನ ಕೈಗೆ ದಾರವೊಂದನ್ನು ಕಟ್ಟಿ ಪೂಜಿಸುತ್ತಾಳೆ. ದೇವತೆಗಳು ಯುದ್ಧವನ್ನು ಗೆಲ್ಲಬೇಕು ಎನ್ನುವ ನಿಷ್ಠೆಯೊಂದಿಗೆ ದಾರವನ್ನು ಕಟ್ಟಿರುತ್ತಾಳೆ. ತದನಂತರ ದೇವತೆಗಳು ಯುದ್ಧವನ್ನು ಗೆಲ್ಲುತ್ತಾರೆ.




