ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಂತ್ರಿಕ ಕಾರಣಗಳಿಂದ ಪಿಎಂ-ಕಿಸಾನ್ ಯೋಜನೆಯ ಹಣದಿಂದ ವಂಚಿತರಾಗಿದ್ದ ಕರ್ನಾಟಕದ ಸಾವಿರಾರು ರೈತರಿಗೆ ಈಗ ದೊಡ್ಡ ಮಟ್ಟದ ಆರ್ಥಿಕ ಸಮಾಧಾನ ಸಿಕ್ಕಿದೆ. ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನಿರಂತರ ಪ್ರಯತ್ನದ ಫಲವಾಗಿ, ಕೇಂದ್ರ ಸರ್ಕಾರವು ಬಾಕಿ ಹಣ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದ ಚಲುವರಾಯಸ್ವಾಮಿ ಅವರು, ತಾಂತ್ರಿಕ ದೋಷಗಳಿಂದಾಗಿ ರಾಜ್ಯದ ಸುಮಾರು 30,000ಕ್ಕೂ ಹೆಚ್ಚು ಅರ್ಹ ರೈತರು ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದರು. ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಂದರ್ಭದಲ್ಲೂ ಈ ಕುರಿತು ಖುದ್ದಾಗಿ ಚರ್ಚಿಸಿದ್ದರು.
ರಾಜ್ಯದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದ್ದಾರೆ:
ಈಗಾಗಲೇ ರಾಜ್ಯ ಸರ್ಕಾರ ನೀಡಿದ ದೃಢೀಕರಣದ ಆಧಾರದ ಮೇಲೆ 22,000ಕ್ಕೂ ಹೆಚ್ಚು ರೈತರನ್ನು 22ನೇ ಕಂತಿನ ಪಾವತಿ ಪಟ್ಟಿಗೆ ಸೇರಿಸಲಾಗಿದೆ. ಈ ರೈತರ ಖಾತೆಗಳಿಗೆ ಶೀಘ್ರದಲ್ಲೇ ನೇರವಾಗಿ ಹಣ ಜಮೆಯಾಗಲಿದೆ.
ಬಾಕಿ ಉಳಿದಿರುವ ಪ್ರಕರಣಗಳನ್ನು ರಾಜ್ಯ ಅಧಿಕಾರಿಗಳು ಪರಿಶೀಲಿಸಿ ದೃಢೀಕರಿಸಿದ ತಕ್ಷಣ, ಅವರನ್ನೂ ಯೋಜನೆಯಡಿ ಸೇರಿಸಲಾಗುವುದು ಎಂದು ಕೇಂದ್ರ ಭರವಸೆ ನೀಡಿದೆ.
“ರಾಜ್ಯದ ಅನ್ನದಾತರ ಹಿತದೃಷ್ಟಿಯಿಂದ ನಾವು ಸಲ್ಲಿಸಿದ ಮನವಿಯನ್ನು ಮನ್ನಿಸಿ, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿದ ಕೇಂದ್ರ ಕೃಷಿ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳು.” ಎಂದು ಎನ್. ಚಲುವರಾಯಸ್ವಾಮಿ, ಕೃಷಿ ಸಚಿವರು ತಿಳಿಸಿದ್ದಾರೆ.
ಅರ್ಹ ರೈತರಿಗೆ ತಡವಾಗಿಯಾದರೂ ನ್ಯಾಯ ಸಿಗುತ್ತಿರುವುದು ಖುಷಿಯ ವಿಚಾರವಾಗಿದ್ದು, ಉಳಿದ ರೈತರ ದಾಖಲೆಗಳ ಪರಿಶೀಲನೆಯನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.



