ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ 24ರಂದು ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಆದರೆ ಇಲ್ಲಿ ಕೊಲೆ ಮಾಡಿದ್ದು, ಮಹಿಳೆಯ ಸ್ವಂತ ಮಗನೇ ಆಗಿದ್ದು, ಈ ವಿಚಾರ ತಿಳಿದು ಇಡೀ ಗ್ರಾಮವೇ ಆಘಾತಕ್ಕೀಡಾಗಿದೆ.
ಡಿಸೆಂಬರ್ 24 ರ ರಾತ್ರಿ ಶ್ಯಾಮ್‌ಪುರ ಗ್ರಾಮದ ಸರಪಂಚ್ ಅವರ ಪತ್ನಿ ಬಲ್ಜಿಂದರ್ ಕೌರ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆಯಿತು. ಆದರೆ ಈ ಸಾವು ಕೊಲೆಯೋ ಅಸಹಜ ಸಾವೋ ಎಂಬ ಅನುಮಾನ ಬಂದಿದ್ದರಿಂದ ಪೊಲೀಸರು ಈ ಪ್ರಕರಣವನ್ನು ಸಿಟಿ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಿದ್ದರು. ಹೀಗೆ ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ಕೊಲೆ ಆರೋಪಿ ಆ ಮಹಿಳೆಯ ಮಗನೇ ಎಂಬ ವಿಚಾರ ತಿಳಿದು ಶಾಕ್ ಆಗಿತ್ತು. ತಾಂತ್ರಿಕ ಸಾಕ್ಷಿಗಳು, ಮೊಬೈಲ್ ಫೋನ್ ಲೋಕೇಷನ್ ಟ್ರ್ಯಾಕಿಂಗ್ ಮತ್ತು ಕರೆ ವಿವರ ದಾಖಲೆಗಳಿಂದ ಪೊಲೀಸರು ಈ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ
ತಾಯಿ ಬಲ್ಜಿಂದರ್ ಕೌರ್ ಅವರನ್ನೇ ಕೊಲೆ ಮಾಡಿದ ಗೋಮಿತ್ ರಥಿ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರಕ್ಕೆ ಕುಟುಂಬದಲ್ಲೇ ವಿರೋಧವಿತ್ತು. ಹೀಗಾಗಿ ಮಗನ ಈ ಪ್ರೇಮ ಸಂಬಂಧವನ್ನ ದೂರ ಮಾಡುವುದಕ್ಕಾಗಿ ಗೋಮಿತ್ ರಥಿಯನ್ನು ಅವನ ಪೋಷಕರು ವಿದೇಶಕ್ಕೆ ಕಳುಹಿಸಿದ್ದರು.
ಆದರೆ ಡಿಸೆಂಬರ್ 18 ರಂದು ತನ್ನ ಕುಟುಂಬದವರಿಗೂ ಮಾಹಿತಿ ನೀಡದೇ ಗೋಮಿತ್ ರಥಿ ಇಂಗ್ಲೆಂಡ್‌ನಿಂದ ಭಾರತಕ್ಕೆ ರಹಸ್ಯವಾಗಿ ಮರಳಿದ್ದ. ಆತನ ಬರುವಿಕೆಯ ಬಗ್ಗೆ ಆತನ ಸ್ನೇಹಿತನಿಗೆ ಮಾತ್ರ ತಿಳಿದಿತ್ತು. ಆತನ ಸ್ನೇಹಿತ ಪಂಕಜ್ ಕೂಡ ಇದನ್ನು ಗ್ರಾಮಸ್ಥರು ಹಾಗೂ ಸಂಬಂಧಿಕರಿಂದ ಮರ ಮಾಚಿದ್ದರು. ಪೊಲೀಸರ ತನಿಖೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿ ರಾಕೇಶ್ ಕುಮಾರ್ ಅವರ ಪ್ರಕಾರ, ಗೋಮಿತ್ ರಥಿ ತನ್ನ ತಾಯಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಮಗನ ವರ್ತನೆಯ ಬಗ್ಗೆ ಆಕೆ ಆಗಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಳು. ಈ ಮಧ್ಯೆ ಗೋಮಿತ್ ಬೇರೆ ಜಾತಿಯ ಮಹಿಳೆಯನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಚಾರ ತಿಳಿದ ನಂತರ ತಾಯಿ ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದಳು ಇದು ಇಬ್ಬರ ನಡುವಣ ಸಂಬಂಧ ಹದಗೆಡುವುದಕ್ಕೆ ಇನ್ನಷ್ಟು ಕಾರಣವಾಗಿತ್ತು.
ಈ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ಕುಟುಂಬ ಸದಸ್ಯರು, ನಂತರ ಗೋಮಿತ್‌ನನ್ನು ಸ್ಟಡಿ ವೀಸಾದಲ್ಲಿ ಇಂಗ್ಲೆಂಡ್‌ಗೆ ಕಳುಹಿಸಿದರು. ವಿದೇಶದಲ್ಲಿದ್ದ ಗೋಮಿತ್ ರಥಿ ಅಲ್ಲಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಓದುತ್ತಿದ್ದ. ಆದರೆ ತಾಯಿ ಮೇಲಿನ ದ್ವೇಷ ಮಾತ್ರ ಹೆಚ್ಚಾಗ್ತಲೇ ಇತ್ತು.
ಡಿಸೆಂಬರ್ 24 ರಂದು ಗೋಮಿತ್ ತನ್ನ ಗ್ರಾಮಕ್ಕೆ ಹಿಂತಿರುಗಿ ದನದ ಕೊಟ್ಟಿಗೆಯಲ್ಲಿ ಅಡಗಿ ಕುಳಿತು ತಾಯಿ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದಿದ್ದಾನೆ. ಈ ಸಾವನ್ನು ಆಕಸ್ಮಿಕ ಎಂದು ಬಿಂಬಿಸಲು ಶವವನ್ನು ನೀರಿನ ಟ್ಯಾಂಕಿಗೆ ಎಸೆದಿದ್ದಾನೆ. ಇತ್ತ ಗೋಮಿತ್‌ನ ಸ್ನೇಹಿತ ಪಂಕಜ್, ಗೋಮಿತ್ ಭಾರತಕ್ಕೆ ಮರಳಿರುವುದನ್ನು ಮರೆಮಾಚಿದ್ದಲ್ಲದೆ, ಕೊಲೆಯ ಮೊದಲು ಮತ್ತು ನಂತರ ಅವನಿಗೆ ಸಹಾಯ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.



