ಹೊಸದಿಗಂತ ಡಿಜಿಟಲ್ ಡೆಸ್ಕ್ :
ವಿಧಾನಸಭೆಸಭೆಯಲ್ಲಿ ಇಂದುನಾಗಮಂಗಲ ಕೆಎಸ್ಆರ್ಟಿಸಿ ಡಿಪೋ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದ ಗದ್ದಲ, ಕೋಲಾಹಲ ಜೋರಾಗಿತ್ತು. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಮತ್ತು ಸಿಎಂ ಸಿದ್ದರಾಮಯ್ಯ (Siddaramaiah) ನಡುವೆ ತೀವ್ರ ವಾಕ್ಸಮರ ನಡೆಯಿತು.
ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ, ಸಚಿವರ ರಾಜೀನಾಮೆ ಪಡೆಯುವಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಜಂಟಿ ಹೋರಾಟ ನಡೆಸಿದರು.
ಈ ವೇಳೆ ಮಾತನಾಡುವಾಗ ಸಿದ್ದರಾಮಯ್ಯರ ಮಾಧ್ಯಮ ಹೇಳಿಕೆ ಬಗ್ಗೆ ಉಲ್ಲೇಖಿಸಿದ ಹೆಚ್ಡಿಕೆ, ಸಿದ್ದರಾಮಯ್ಯನವರು ಮಾಧ್ಯಮಗಳ ಎದುರು ದೇವೇಗೌಡರು ಕುಟುಂಬದ ಬಗ್ಗೆ ಮಾತಾಡಿದ್ದಾರೆ. ಮುಖ್ಯಮಂತ್ರಿಗಳು ಭಾರೀ ಉತ್ತರ ಕೊಟ್ಟುಬಿಟ್ಟಿದ್ದಾರೆ ಅಂತ ಕೆಲವರು ಅವರಿಗೆ ಶೇಕ್ ಹ್ಯಾಂಡ್ ಕೊಟ್ಟರು. ಇದನ್ನೆಲ್ಲ ನಾನು ಗಮನಿಸಿದ್ದೇನೆ. ದೇವೇಗೌಡರನ್ನು ನೀವು ಕುತ್ತಿಗೆ ಕುಯ್ದ್ರಿ. ಜೆಡಿಎಸ್ನ ಬಿಜೆಪಿ ‘ಬಿ’ ಟೀಮ್ ಅಂದ್ರಿ. ಈಶ್ವರಪ್ಪರಿಂದ ಸಣ್ಣ ವಿಷಯಕ್ಕೆ ರಾಜೀನಾಮೆ ತಗೊಂಡ್ರಲ್ಲ. ಈಗ ಯಾಕೆ ಚೆಲುವರಾಯಸ್ವಾಮಿ ರಾಜೀನಾಮೆ ಕೊಡ್ತಿಲ್ಲ ಅಂತ ಸಿದ್ದರಾಮಯ್ಯಗೆ ಪ್ರಶ್ನಿಸಿದರು.
ಹೆಚ್ಡಿಕೆ ಮಾತಿಗೆ ಸಿಟ್ಟಾದ ಸಿಎಂ, ನಿಮಗೆ ಯಾರು ಹೆದರುಕೊಳ್ಳುವುದಿಲ್ಲ ಕುಮಾರಸ್ವಾಮಿಯವರೇ. ನನಗೂ ಇದಕ್ಕೂ ಏನ್ರೀ ಸಂಬಂಧ. ನನಗೆ ಇದರ ಬಗ್ಗೆ ಗೊತ್ತೇ ಇಲ್ಲ. ಯಾರಿಗೆ ನೀವು ಹೆದರಿಸ್ತೀರಿ. ನಾನು ಹೆದರಿಕೊಂಡು ರಾಜಕಾರಣ ಮಾಡಿಲ್ಲ ಅಂತ ತಿರುಗೇಟು ನೀಡಿದರು. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.