ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ಅಂಡರ್-19 ತಂಡದ ಮಾಜಿ ನಾಯಕ ಧಮ್ಮಿಕಾ ನಿರೋಶನ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಶ್ರೀಲಂಕಾದ ಗಾಲೆ ನಗರದ ಅಂಬಲಂಗೋಡದಲ್ಲಿ 41 ವರ್ಷದ ಧಮ್ಮಿಕಾ ನಿರೋಶನ ಹತ್ಯೆಯಾದ ದುರ್ದೈವಿ ಕ್ರಿಕೆಟಗ.
ಮಂಗಳವಾರ ರಾತ್ರಿ ನಿರೋಶನ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿ ಮತ್ತು ಮಕ್ಕಳ ಎದುರೇ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದ್ದು, ಹತ್ಯೆ ಮಾಡಿದವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.
ನಿರೋಶನ ಅವರ ಕೊಲೆಗೆ ಕಾರಣವೇನು ಎಂಬುದು ಪೊಲೀಸರಿಗೆ ಇನ್ನೂ ಪತ್ತೆಯಾಗಿಲ್ಲ. ಆದರೆ ನಿರೋಶನ ಅವರ ಮೇಲೆ ಗುಂಡಿನ ದಾಳಿ ನಡೆದಾಗ ಆತನ ಪತ್ನಿ ಮತ್ತು ಮಕ್ಕಳು ಸಹ ಮನೆಯಲ್ಲಿದ್ದರು. ಆಗ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ಇದರಿಂದ ನಿರೋಶನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದುವರೆಗೂ ಅಪರಿಚಿತ ವ್ಯಕ್ತಿಯನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಸದ್ಯ ಪೊಲೀಸರು ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ನಿರೋಶನ ಅವರನ್ನು ಏಕೆ ಹತ್ಯೆ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ.
ಧಮ್ಮಿಕಾ ನಿರೋಶನ ಶ್ರೀಲಂಕಾದ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಸೀನಿಯರ್ ತಂಡದಲ್ಲಿ ಆಡುವ ಅವಕಾಶ ಅವರಿಗೆ ಎಂದಿಗೂ ಸಿಗಲಿಲ್ಲ. ಬಲಗೈ ವೇಗದ ಬೌಲರ್ ಆಗಿದ್ದ ಅವರು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಕೂಡ ಆಗಿದ್ದರು. ಅವರು 2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್ ಪರ 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ.
2000 ರಲ್ಲಿ ಶ್ರೀಲಂಕಾದ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ ನಿರೋಶನ ಅವರು ಶ್ರೀಲಂಕಾ ಅಂಡರ್ 19 ತಂಡದಲ್ಲಿ 2 ವರ್ಷಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು 10 ಪಂದ್ಯಗಳಲ್ಲಿ ನಾಯಕತ್ವವನ್ನೂ ವಹಿಸಿದ್ದರು. ಶ್ರೀಲಂಕಾದ ಅನೇಕ ದೊಡ್ಡ ಸ್ಟಾರ್ ಆಟಗಾರರಾದ ಏಂಜೆಲೊ ಮ್ಯಾಥ್ಯೂಸ್, ಉಪಲ್ ತರಂಗ ಅವರ ಅಂಡರ್ 19 ದಿನಗಳಲ್ಲಿ ಧಮ್ಮಿಕಾ ನಾಯಕತ್ವದಲ್ಲಿ ಆಡಿದ್ದಾರೆ. ಅಂತಿಮವಾಗಿ ನಿರೋಶನ ಡಿಸೆಂಬರ್ 2004 ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ನಿವೃತ್ತರಾಗಿದ್ದರು.