ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಬರಮಾಡಿಕೊಳ್ಳಲಾಗಿದೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಹಿನ್ನೆಲೆ ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿ ಎರಡು ಗಂಟೆವರೆಗೂ ವಿಸ್ತರಿಸಲಾಗಿತ್ತು. ಪರಿಣಾಮ ನಿನ್ನೆ ಒಂದೇ ದಿನ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯವಾಗಿದೆ.
ಹೊಸ ವರ್ಷ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ 5ರಿಂದ ಮಧ್ಯರಾತ್ರಿ 2.45ರವರೆಗೆ ಮೆಟ್ರೋ ರೈಲುಗಳು ಸಂಚಾರ ಮಾಡಿವೆ. ನಿನ್ನೆ ಒಂದೇ ದಿನ ಪಿಂಕ್ ಲೈನ್ನಲ್ಲಿ ಒಟ್ಟು 4,00,583, ಗ್ರೀನ್ ಲೈನ್ನಲ್ಲಿ 2,90,530, ಪಿಂಕ್ ಮತ್ತು ಗ್ರೀನ್ ಮಾರ್ಗದಿಂದ ಒಟ್ಟು 8,59,467, ಪೇಪರ್ ಟಿಕೆಟ್ ಮೂಲಕ ಮೆಟ್ರೋಟದಲ್ಲಿ 5,423 ಮತ್ತು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ 1,62,931 ಜನರು ಪ್ರಯಾಣ ಮಾಡಿದ್ದಾರೆ. ಆ ಮೂಲಕ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯ ಹರಿದುಬಂದಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು 2025ರ ಹೊಸ ವರ್ಷದ ಮುನ್ನಾದಿನದಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಣೆ ಮಾಡಿತ್ತು. ಕೊನೆಯ ರೈಲು ಜನವರಿ 1, 2025 ರಂದು ಮುಂಜಾನೆ 02:00 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತದೆ ಎಂದು ತಿಳಿಸಿತ್ತು.
ಎಂ.ಜಿ ರಸ್ತೆಯಲ್ಲಿ ಜನಸಂದಣಿ ಹಿನ್ನೆಲೆ ಡಿಸೆಂಬರ್ 31, 2024 ರಂದು ರಾತ್ರಿ 11:00 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ರೈಲುಗಳು ಸ್ಟಾಪ್ ಮಾಡಲಾಗಿತ್ತು.