ಹೊಸದಿಗಂತ ವರದಿ ಮಡಿಕೇರಿ:
ಕೊಡಗಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆಂದು ಬಂದಿದ್ದ ತಮಿಳುನಾಡು ಮೂಲದ ವಿದ್ಯಾರ್ಥಿಯೊಬ್ಬ ವಾಹನ ಅಪಘಾತದಲ್ಲಿ ಸಾವಿಗೀಡಾದ ಘಟನೆ ಶನಿವಾರ ತಡರಾತ್ರಿ ಗುಡ್ಡೆಹೊಸೂರಿನಲ್ಲಿ ನಡೆದಿದೆ.
ತಮಿಳುನಾಡಿನ ನಾಮಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಗಸ್ಟಿನ್ ದಾಸ್(19) ಮೃತಪಟ್ಟವರಾಗಿದ್ದು, ಮತ್ತೋರ್ವ ವಿದ್ಯಾರ್ಥಿ ರವಿಕುಮಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಲೇಜಿನ 70 ಮಂದಿ ವಿದ್ಯಾರ್ಥಿಗಳು ಕೊಡಗಿನ ಪ್ರವಾಸಕ್ಕೆಂದು ಬಂದಿದ್ದು, ಶನಿವಾರ ರಾತ್ರಿ ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡೆಹೊಸೂರಿನ ಹೊಟೇಲೊಂದ ಬಳಿ ಚಹಾ ಕುಡಿಯಲೆಂದು ವಾಹನ ನಿಲ್ಲಿಸಿದ್ದರು.
ಈ ಸಂದರ್ಭ ವೇಗವಾಗಿ ಬಂದ ಮಾರುತಿ ಓಮ್ನಿ ಕಾರು ಅಗಸ್ಟಿನ್ ದಾಸ್ ಹಾಗೂ ರವಿಕುಮಾರ್’ಗೆ ಡಿಕ್ಕಿಯಾಗಿ ಪರಾರಿಯಾಗಿದ್ದು, ತೀವ್ರವಾಗಿ ಗಾಯಗೊಂಡ ಅಗಸ್ಟಿನ್ ಸ್ಥಳದಲ್ಲೇ ಸಾವಿಗೀಡಾದರೆ, ರವಿಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಕಾರಿಗಾಗಿ ಶೋಧ ನಡೆಸುತ್ತಿದ್ದಾರೆ.