ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೋನ್ ಹುಚ್ಚು ಮಕ್ಕಳಿಂದ ಯಾವೆಲ್ಲಾ ಕೆಲಸಗಳನ್ನು ಮಾಡಿಸುತ್ತದೆ ನೋಡಿ, ಇಲ್ಲೊಬ್ಬ ಹತ್ತನೇ ತರಗತಿ ವಿದ್ಯಾರ್ಥಿನಿ ಫೋನ್ ಕೊಳ್ಳಲು ಹಣ ಬೇಕೆಂದು ತನ್ನ ರಕ್ತ ಮಾರಲು ಪ್ರಯತ್ನಿಸಿದ್ದಾಳೆ. ಹೌದು, ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್ ಇದೆ, ತನಗೂ ಫೋನ್ ಬೇಕು ಎಂದು ಪಶ್ಚಿಮ ಬಂಗಾಳದ ದಿನಾಜ್‌ಪುರದಲ್ಲಿ ಯುವತಿಯೊಬ್ಬಳು ರಕ್ತ ಮಾರಲು ಪ್ರಯತ್ನಿಸಿದ್ದಾಳೆ.
ಒಂಬತ್ತು ಸಾವಿರ ರೂಪಾಯಿಯ ಫೋನ್ ಆರ್ಡರ್ ಮಾಡಿದ ಯುವತಿ ಬಳಿ ಹಣ ಇರಲಿಲ್ಲ. ಕ್ಯಾಶ್ ಆನ್ ಡೆಲಿವರಿ ಆಪ್ಷನ್ ಬಳಸಿ ಮನೆಗೆ ಆಕೆ ಫೋನ್ ಆರ್ಡರ್ ಮಾಡಿದ್ದಾಳೆ. ಫೋನ್ ಇಂದು ಬರುತ್ತದೆ ಎನ್ನುವ ಮೆಸೇಜ್ ಬಂದಂತೆ ಆಕೆ ಗಾಬರಿಯಾಗಿದ್ದಾಳೆ. ಮನೆಯವರ ಬಳಿ ಕೇಳುವಂತಿಲ್ಲ, ಇನ್ನು ಸ್ನೇಹಿತರ ಬಳಿ ಇಷ್ಟು ಹಣ ಇರಲು ಸಾಧ್ಯವಿಲ್ಲ.
ಸಮೀಪದ ಬಾಲೂರ್ ಆಸ್ಪತ್ರೆಗೆ ಹೋಗಿ ನಾನು ರಕ್ತದಾನ ಮಾಡುತ್ತೇನೆ ನನಗೆ ಹಣ ಕೊಡಿ ಎಂದು ಕೇಳಿದ್ದಾಳೆ. ಇದು ಅಸಹಜ ಎನಿಸಿ ಚೈಲ್ಡ್ ಕೇರ್ ಡಿಪಾರ್ಟ್‌ಮೆಂಟ್‌ಗೆ ಆಕೆಯನ್ನು ಕಳಿಸಲಾಗಿದೆ. ಅಲ್ಲಿ ಇನ್ನೇನು ಸದ್ಯದಲ್ಲೇ ನನ್ನ ಫೋನ್ ಬರಲಿದೆ ಅದಕ್ಕೆ ಹಣ ಬೇಕು, ರಕ್ತ ಕೊಟ್ಟರೆ ಹಣ ಕೊಡುತ್ತಾರೆ ಎಂದು ಆಲೋಚಿಸಿ ಹೀಗೆ ಮಾಡಿದೆ ಎಂದಿದ್ದಾಳೆ.
ಸ್ಮಾರ್ಟ್‌ಫೋನ್ ಅಷ್ಟೇ ಅಲ್ಲ, ತಮ್ಮ ಇಷ್ಟದ ವಸ್ತು ದಕ್ಕಿಸಲು ಮಕ್ಕಳು ಏನೆಲ್ಲಾ ಹಾದಿ ಹಿಡಿಯುತ್ತಿದ್ದಾರೆ ಎಂದು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.