ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ದರೋಜಿ ಕರಡಿಧಾಮದ ಬಳಿ ಒಂದು ಅಪರೂಪದ ಘಟನೆ ನಡೆದಿದೆ. ವಿಶಿಷ್ಟ ಕಿವಿಗಳನ್ನು ಹೊಂದಿರುವ ಭಾರತೀಯ ಸ್ಕಾಪ್ಸ್ ಗೂಬೆ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಪತ್ತೆಯಾಗಿದೆ. ಇದು ಪಕ್ಷಿ ಪ್ರೇಮಿಗಳಲ್ಲಿ ಮತ್ತು ಅರಣ್ಯ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ.
ದರೋಜಿ ಕರಡಿಧಾಮದ ಅರಣ್ಯ ಪ್ರದೇಶದ ಬಳಿ ಕಾಣಿಸಿಕೊಂಡ ಈ ಗೂಬೆ ಗಾತ್ರದಲ್ಲಿ ಚಿಕ್ಕದಾಗಿದ್ದು, ಕೇವಲ 20-25 ಸೆಂಟಿಮೀಟರ್ ಉದ್ದವಿದೆ. ಇದು ಮುಖ್ಯವಾಗಿ ಬೂದು ಬಣ್ಣದ್ದಾಗಿದ್ದು, ಅದರ ಕಣ್ಣುಗಳು ಕಡು ಬಣ್ಣವನ್ನು ಹೊಂದಿವೆ. ವಿಶೇಷವೆಂದರೆ, ಇದರ ದೇಹದ ಬಣ್ಣವು ಸುತ್ತಲಿನ ಪರಿಸರಕ್ಕೆ ಸುಲಭವಾಗಿ ಹೊಂದಿಕೊಳ್ಳುವುದರಿಂದ ಹಗಲಿನ ಸಮಯದಲ್ಲಿ ಇದನ್ನು ಪತ್ತೆ ಹಚ್ಚುವುದು ಬಹಳ ಕಷ್ಟಕರವಾಗಿದೆ.
ಪಕ್ಷಿ ಪ್ರೇಮಿಗಳಾದ ಸಬ್ಯಸಾಚಿ ರಾಯ್, ಶ್ರೀಧರ್ ಪೆರುಮಾಳ್ ಮತ್ತು ಪಂಪಯ್ಯ ಸ್ವಾಮಿ ಮಳೆಮಠ ಅವರು ಗೂಬೆಯ ‘ವಟ್ ವಟ್’ ಎಂಬ ವಿಶಿಷ್ಟ ಕರೆಯನ್ನು ಹಿಂಬಾಲಿಸಿ ಹರಸಾಹಸಪಟ್ಟು ಅದನ್ನು ಗುರುತಿಸಿದ್ದಾರೆ. ನಿರಂತರ ಪ್ರಯತ್ನದ ಬಳಿಕ ಈ ಅಪರೂಪದ ಗೂಬೆಯ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಇವರು ಯಶಸ್ವಿಯಾಗಿದ್ದಾರೆ.
ಈ ಹಿಂದೆ ಈ ಭಾಗದಲ್ಲಿ ಸ್ಕಾಪ್ಸ್ ಗೂಬೆಗಳು ಪತ್ತೆಯಾಗಿರಲಿಲ್ಲ. ಹೀಗಾಗಿ, ದರೋಜಿ ಕರಡಿಧಾಮದ ಬಳಿ ಇದರ ಹೊಸ ನೋಟವು ಪರಿಸರ ಮತ್ತು ವನ್ಯಜೀವಿಗಳ ಅಧ್ಯಯನದ ದೃಷ್ಟಿಯಿಂದ ಮಹತ್ವದ ಸಂಗತಿಯಾಗಿದೆ.