ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ನೆಲಮಂಗಲದ ಸೋಲೋಹಳ್ಳಿಯ ತೋಟದ ಮನೆಯಲ್ಲಿ ನೆರವೇರಿತು.
ಲೀಲಾವತಿ ಮಗ ವಿನೋದ್ ರಾಜ್ ಅಂತಿಮ ವಿಧಿ ವಿಧಾನ ನೆರವೇರಿಸಿದ್ದು, ಹಿಂದು ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ಲೀಲಾವತಿ ಅಂತ್ಯ ಸಂಸ್ಕಾರ ನೆರವೇರಿತು. ಮನೆಯಿಂದ 500 ಮೀಟರ್ ದೂರದಲ್ಲಿರುವ ತೋಟದ ಮನೆಯಲ್ಲಿ ಅಂತಿಮ ಸಂಸ್ಕಾರ ನೆರವೇರಿತು.
ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಸರ್ಕಾರದ ಪರವಾಗಿ ಸಚಿವ ಕೆ.ಎಚ್ ಮುನಿಯಪ್ಪ ಪುಷ್ಪಗುಚ್ಛ ಸಮರ್ಪಿಸಿದರು. ನಂತರ ವಿನೋದ್ ರಾಜ್ ಪೂಜೆ ಸಲ್ಲಿಸಿದರು. ಬಳಿಕ ಹಿಂದು ಧರ್ಮದ ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಇದಕ್ಕೂ ಮೊದಲು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಹಾಗೂ ಗಣ್ಯರಿಗೆ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕನ್ನಡ ಚಿತ್ರರಂಗದ ಹಲವಾರು ಕಲಾವಿದರು ಲೀಲಾವತಿಯವರ ಅಂತಿಮ ದರ್ಶನ ಪಡೆದರು. ಸಿಎಂ ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹಿರಿಯ ನಟಿ ಲೀಲಾವತಿಯವರ ಪಾರ್ಥೀವ ಶರೀರಕ್ಕೆ ಪುಷ್ಟಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದ್ದಾರೆ.