Saturday, January 10, 2026

ಸೋರುತ್ತಿದ್ದ ಅನಿಲ ಪರೀಕ್ಷಿಸಲು ಹೋಗಿ ಸಂಭವಿಸಿತು ಘೋರ ದುರಂತ: 6 ಮಂದಿಗೆ ಗಂಭೀರ ಗಾಯ

ಹೊಸದಿಗಂತ ಅಂಕೋಲಾ:

ತಾಲೂಕಿನ ಕೇಣಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡ ಭೀಕರ ಘಟನೆ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೇಣಿಯ ಗೌರೀಶ ನಾಯಕ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಹೊನ್ನಿಕೇರಿ ಮೂಲದ ಸುದರ್ಶನ ಲೋಕಪ್ಪ ನಾಯ್ಕ (48) ಅವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಸಿಲಿಂಡರ್‌ನಿಂದ ಅನಿಲ ವಾಸನೆ ಬರುತ್ತಿದ್ದ ಕಾರಣ, ಅದನ್ನು ಪರೀಕ್ಷಿಸಲು ಸ್ಥಳೀಯ ನಿವಾಸಿ ಶ್ರವಣ್ ಎಂಬುವವರನ್ನು ಕರೆಯಿಸಲಾಗಿತ್ತು.

ಶ್ರವಣ್ ಅವರು ಸಿಲಿಂಡರ್ ಪರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಇಡೀ ಮನೆಯಲ್ಲಿ ಹರಡಿದ್ದ ಅನಿಲ ಸ್ಫೋಟಗೊಂಡಿದೆ. ಈ ಅವಘಡದಲ್ಲಿ ಸುದರ್ಶನ ನಾಯ್ಕ, ಅವರ ಪತ್ನಿ, 10 ವರ್ಷದ ಮಗ, ಪರೀಕ್ಷೆಗೆ ಬಂದಿದ್ದ ಶ್ರವಣ್, ಮನೆಯ ಮಾಲೀಕ ಗೌರೀಶ ನಾಯ್ಕ ಅವರ ಪತ್ನಿ ಹಾಗೂ 5 ವರ್ಷದ ಮೊಮ್ಮಗ ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾರವಾರ, ಕುಮಟಾ ಹಾಗೂ ಮಣಿಪಾಲದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!