ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಜನಪ್ರಿಯ ನಟ ದರ್ಶನ್ ಕುರಿತಾಗಿ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತೆ ಚರ್ಚೆಯ ಕೇಂದ್ರವಾಗಿದೆ. ಕಳೆದ ವರ್ಷ ಜೂನ್ನಲ್ಲಿ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು. ನಂತರ ಕರ್ನಾಟಕ ಹೈಕೋರ್ಟ್ನಿಂದ ಜಾಮೀನು ಪಡೆದು ಅವರು ಹೊರಗೆ ಬಂದಿದ್ದರು. ಆದರೆ, ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪು ನೀಡಿದ್ದು, ದರ್ಶನ್ ಅವರಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿದೆ. ಕೋರ್ಟ್ ಸ್ಪಷ್ಟವಾಗಿ ಹೇಳಿರುವಂತೆ, ಅವರಿಗೆ ಯಾವುದೇ ಐಷಾರಾಮಿ ಸವಲತ್ತುಗಳು ದೊರೆಯಬಾರದು, ಜೈಲಿನ ನಿಯಮಾವಳಿ ಪ್ರಕಾರವೇ ನಡೆಸಿಕೊಳ್ಳಬೇಕು. ಈ ತೀರ್ಪಿನ ಪರಿಣಾಮವಾಗಿ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲಿನ ಕಠಿಣ ಜೀವನಕ್ಕೆ ಮರಳಬೇಕಾದ ಪರಿಸ್ಥಿತಿ ಎದುರಾಗಿದೆ.
ದರ್ಶನ್ ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ಅವರಿಗೆ ಮನೆ ಊಟ ಹಾಗೂ ಹಲವು ವಿಶೇಷ ಸೌಲಭ್ಯಗಳು ದೊರೆತಿದ್ದವು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆ ಆ ವೇಳೆ ಅಧಿಕಾರಿಗಳ ವಿರುದ್ಧವೂ ಕೇಸ್ ದಾಖಲಾಗಿತ್ತು. ಇದೇ ವಿಚಾರವನ್ನು ಗಮನಿಸಿದ ಸುಪ್ರೀಂ ಕೋರ್ಟ್, ಈ ಬಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈಗ ಜೈಲು ನಿಯಮ ಪ್ರಕಾರವೇ ಅವರಿಗೆ ಊಟ ಮತ್ತು ದಿನನಿತ್ಯದ ಅಗತ್ಯಗಳನ್ನು ಒದಗಿಸಲಾಗುತ್ತಿದೆ. ಜೈಲು ಮೆನುವಿನಲ್ಲಿ ಏನು ಇರುವುದೋ ಅದನ್ನೇ ತಿನ್ನಬೇಕಾಗಿದೆ. ಮನೆಯಿಂದ ಬರುವ ಆಹಾರಕ್ಕೆ ಸಂಪೂರ್ಣ ತಡೆ ವಿಧಿಸಲಾಗಿದೆ.
ಇದಲ್ಲದೆ, ಬೆಂಗಳೂರಿನಲ್ಲಿ ಮಳೆಯ ವಾತಾವರಣ ತಂಪಾಗಿರುವುದರಿಂದ ಹೊದ್ದಿಕೊಳ್ಳಲು ದರ್ಶನ್ ಎರಡು ಬೆಡ್ಶೀಟ್ ಕೇಳಿದ್ದರು. ಆದರೆ ಜೈಲು ಮ್ಯಾನ್ಯುಯಲ್ ಪ್ರಕಾರ ಒಂದೇ ಬೆಡ್ಶೀಟ್ ನೀಡಲಾಗುತ್ತದೆ ಎಂಬ ನಿಯಮದಿಂದ, ಅವರಿಗೆ ಹೆಚ್ಚುವರಿ ಸೌಲಭ್ಯ ನಿರಾಕರಿಸಲಾಯಿತು. ಮೊದಲೇ ಮುಡಿಕೊಟ್ಟಿರುವುದರಿಂದ ಈಗ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದ್ದು, ಸದ್ಯ ಅವರು ಕ್ವಾರಂಟೈನ್ ಸೆಲ್ನಲ್ಲಿ ಉಳಿದ ಆರೋಪಿಗಳ ಜೊತೆ ಇದ್ದಾರೆ. ನಂತರ ಮುಖ್ಯ ಸೆಲ್ಗೆ ವರ್ಗಾವಣೆ ಮಾಡಲಾಗುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್ನ ತೀರ್ಪಿನಿಂದ ದರ್ಶನ್ ಅವರ ಜಾಮೀನು ರದ್ದುಗೊಂಡಿರುವುದರಿಂದ, ಅವರ ಮುಂದಿನ ದಿನಗಳು ಸಂಪೂರ್ಣವಾಗಿ ಜೈಲು ಮ್ಯಾನ್ಯುಯಲ್ ಪ್ರಕಾರವೇ ಸಾಗಲಿದೆ. ಯಾವುದೇ ವಿಶೇಷ ಸೌಲಭ್ಯಗಳಿಲ್ಲದೆ ಸಾಮಾನ್ಯ ಕೈದಿಗಳಂತೆ ಬದುಕಬೇಕಾದ ಪರಿಸ್ಥಿತಿ ಬಂದಿದೆ. ಒಮ್ಮೆ ಐಷಾರಾಮಿ ಜೀವನ ನಡೆಸುತ್ತಿದ್ದ ನಟ, ಈಗ ಕಟ್ಟುನಿಟ್ಟಿನ ನಿಯಮದ ಅಡಿಯಲ್ಲಿ ದಿನಗಳನ್ನು ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.