ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿಗೆ ತೆರಳಿ ದರುಶನ ಮುಗಿಸಿ ವಾಪಸ್ಸು ಬರುತ್ತಿದ್ದ ಭಕ್ತರ ಟಿಟಿ ವಾಹನ ಭೀಕರ ಅಪಘಾತಕ್ಕೀಡಾಗಿ, ಸ್ಥಳದಲ್ಲೇ ಮೂವರು ಭಕ್ತರು ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನ ಕುರುಬಲಕೋಟದ ಚೆನ್ನಾಮರ್ರಿ ಮಿಟ್ಟ ಬಳಿ ನಡೆದಿದೆ. ಈ ಅಪಘಾತದಲ್ಲಿ ಇನ್ನೂ ಒಂಬತ್ತು ಜನ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಿಂದ ತಿರುಪತಿ ವೆಂಕಟೇಶ್ವರ ದರ್ಶನಕ್ಕೆ ತೆರಳಿದ್ದ ಭಕ್ತರು ವಾಪಸ್ಸು ಬರುತ್ತಿದ್ದ ವೇಳೆ, ಟಿಟಿ ವಾಹನಕ್ಕೆ ಅಪರಿಚಿತ ಬೃಹತ್ ವಾಹನ ಡಿಕ್ಕಿ ಹೊಡೆದು ಈ ಭೀಕರ ದುರಂತ ಸಂಭವಿಸಿದೆ. ಅಪಘಾತದ ರಭಸದಿಂದ ಟಿಟಿ ವಾಹನ ಸಂಪೂರ್ಣ ಜಖಂಗೊಂಡಿದೆ. ಸ್ಥಳದಲ್ಲೇ ಮೃತಪಟ್ಟವರನ್ನು ಮೇಘರ್ಷ್ (17), ಚರಣ್ (17) ಹಾಗೂ ಶ್ರಾವಣಿ (28) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮದನಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಡಿಕ್ಕಿ ಹೊಡೆದ ಬೃಹತ್ ವಾಹನದ ಚಾಲಕನ ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ದಟ್ಟ ವಾಹನ ಸಂಚಾರ ಮತ್ತು ರಸ್ತೆ ಬೆಳಕು ಕೊರತೆ ಈ ಅಪಘಾತಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.