ಇಂದಿನ ವೇಗದ ಯುಗದಲ್ಲಿ ಕುಟುಂಬಗಳು ವಿಭಜನೆಯಾದಂತೆ, ಹಳೆಯ ಪೀಳಿಗೆ ಏಕಾಂಗಿಯಾಗುತ್ತಿರುವುದು ನಿತ್ಯದ ಸುದ್ದಿ. ಮಕ್ಕಳು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋದಂತೆ, ಊರು ಖಾಲಿಯಾಗುತ್ತಿದೆ. ಮನೆಗಳಲ್ಲಿ ಸಡಗರ ಕಮ್ಮಿಯಾದಂತೆ, ಅಡುಗೆಮನೆಯಲ್ಲಿ ಸದ್ದು ಕೂಡ ಕಡಿಮೆಯಾಗಿತ್ತಿದೆ. ಆದರೆ, ಗುಜರಾತ್‌ನ ಚಂದಂಕಿ ಗ್ರಾಮದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿನ ಜನರು ಒಂದಾಗಿ, ತಮ್ಮ ಊರಿನ ವೃದ್ಧರಿಗಾಗಿ ಸಂಕಲ್ಪ ಮಾಡಿಕೊಂಡು ಒಂದು ಸಾಮಾಜಿಕ ಕ್ರಾಂತಿ ಹುಟ್ಟುಹಾಕಿದ್ದಾರೆ. ಅದೇ ಸಮುದಾಯ ಅಡುಗೆಮನೆ.
‘ಸಮುದಾಯ ಅಡುಗೆಮನೆ’ ಎಂಬ ಕಲ್ಪನೆ, ವೃದ್ಧರ ಬದುಕಿಗೆ ನವಚೇತನ ನೀಡಿದೆ. ಇದು ಕೇವಲ ಆಹಾರವಲ್ಲ; ಇದು ಆತ್ಮೀಯತೆ ಮತ್ತು ಆತ್ಮಬಲದ ಕಥೆ.
ಒಂಟಿತನದ ವಿರುದ್ಧ ಜನರ ಸೇಡು
ಒಂದು ಕಾಲದಲ್ಲಿ ಸುಮಾರು 1,100 ನಿವಾಸಿಗಳ ವಾಸವಿದ್ದ ಚಂದಂಕಿಯಲ್ಲಿ ಇಂದು ಕೇವಲ 500 ಮಂದಿ ಉಳಿದಿದ್ದಾರೆ. ಬಹುತೇಕರು ವೃದ್ಧರು. ಅವರ ಮಕ್ಕಳೆಲ್ಲರೂ ಉದ್ಯೋಗಗಳಿಗಾಗಿ ನಗರಗಳಿಗೆ ಅಥವಾ ವಿದೇಶಗಳಿಗೆ ವಲಸೆ ಹೋದವರು. ಊರು ಒಂಟಿಯಾಗುತ್ತಿದ್ದಂತೆ, ಅಡುಗೆಮನೆಗಳ ಘಮ ಕಡಿಮೆಯಾಗಿ ಸಾಮಾಜಿಕ ಕ್ರಾಂತಿಯೊಂದುಪ್ರಾರಂಭವಾಯಿತು. ಎಲ್ಲರಿಗೂ ಒಂದೇ ಅಡುಗೆಮನೆ.
ಚಂದಂಕಿಯ ಸಮುದಾಯ ಅಡುಗೆಮನೆ ದಿನಕ್ಕೆ ಎರಡು ಬಾರಿ ಎಲ್ಲರಿಗೂ ಪೌಷ್ಟಿಕ ಊಟ ನೀಡುತ್ತದೆ. ಪ್ರತಿ ವ್ಯಕ್ತಿಯು ತಿಂಗಳಿಗೆ 2,000 ಮಾತ್ರ ಪಾವತಿಸುತ್ತಾರೆ. ಈ ಹಣದಲ್ಲಿ ನೂರಾರು ಅಡುಗೆಗಳು ತಯಾರಾಗಿ, ತಟ್ಟೆಗೆ ಬರುವಾಗ ಪ್ರೀತಿಯನ್ನುತರುತ್ತವೆ. ಅಡುಗೆ ಮಾಡುವವರಿಗೂ ಯೋಗ್ಯ ವೇತನ – ತಿಂಗಳಿಗೆ 11,000 ಪಾವತಿಸಲಾಗುತ್ತದೆ.
ಈ ಯೋಜನೆಗೆ ಅಡಿಪಾಯ ಹಾಕಿದವರೇ ಪೂಣಂಭಾಯಿ ಪಟೇಲ್. ನ್ಯೂಯಾರ್ಕ್‌ನಲ್ಲಿ 20 ವರ್ಷ ಕಳೆದ ಈ ಮಹಿಳೆ, ಜೀವನದ ಶಾಂತಿಯ ಕಡೆಗೆ ಹೆಜ್ಜೆ ಇಟ್ಟು, ಚಂದಂಕಿಗೆ ಮರಳಿದರು. ಅವರು ಸಮುದಾಯ ಮನೋಭಾವವನ್ನು ಕಟ್ಟಿಕೊಟ್ಟ ನಾಯಕಿ. “ನಮ್ಮ ಚಂದಂಕಿ ಪರಸ್ಪರ ವಾಸಿಸುವ ಹಳ್ಳಿ” ಎಂಬುದು ಅವರ ದೃಷ್ಟಿಕೋನವಾಗಿದೆ.
ಕೇವಲ ಅಡುಗೆಮನೆ ಅಲ್ಲ – ಸಂಬಂಧಗಳ ಸಂಚಯ
ಈ ಅಡುಗೆಮನೆ ಕೇವಲ ಭೋಜನದ ಸ್ಥಳವಲ್ಲ. ಇದು ಚರ್ಚೆಯ ವೇದಿಕೆ, ನೆನಪಿನ ನಿಲ್ದಾಣ. ಇವು ಜನರನ್ನು ಮಾತನಾಡುವಂತೆ ಪ್ರೇರೇಪಿಸುತ್ತದೆ, ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ವೇದಿಕೆಯಾಗುತ್ತವೆ. ಮಿತ್ರತೆ, ಸಹಕಾರ, ಕಾಳಜಿಯ ಭಾವನೆಗಳು ಇಲ್ಲಿ ಹುಟ್ಟುತ್ತವೆ.
ದೇಶದ ಇತರ ಹಳ್ಳಿಗಳಿಗೆ ಮಾದರಿ
ಚಂದಂಕಿಯ ಈ ಯೋಜನೆ ಈಗ ಇತರ ಹಳ್ಳಿಗಳಿಗೆ ಪ್ರೇರಣೆಯಾಗಿದೆ. ಸಮಾನ ಸಮಸ್ಯೆ ಎದುರಿಸುತ್ತಿರುವ ಊರುಗಳು, ಇಲ್ಲಿನ ಮಾದರಿಯನ್ನು ಅನುಸರಿಸಲು ಮುಂದಾಗುತ್ತಿವೆ. ಅಡುಗೆಮನೆಯ ಕಲ್ಪನೆ, ಅದು ಚಿಕ್ಕದಾಗಿದ್ದರೂ, ಸಮಾಜದಲ್ಲಿ ಬದಲಾವಣೆಯ ಬೃಹತ್ ಬೀಜವಾಗಿದೆ.