August 10, 2026
Monday, August 10, 2026
spot_img

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ಏಕಾಏಕಿ ದಾಳಿ

ಹೊಸ ದಿಗಂತ ವರದಿ, ಮಡಿಕೇರಿ:

ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ನಡೆದಿದೆ.

ಘಟನೆಯಲ್ಲಿ ಕಾರ್ಮಿಕ ಮಹಿಳೆ ಸುನೀತಾ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಮಾಲ್ದಾರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಮಧ್ಯಾಹ್ನದ ವೇಳೆ ಕಾಫಿ ತೋಟದಿಂದ ಏಕಾಏಕಿ ಹೊರಬಂದ ಕಾಡಾನೆ ಕಾರ್ಮಿಕರತ್ತ ದಾಳಿ ನಡೆಸಲು ಯತ್ನಿಸಿದಾಗ ಇತರ ಕಾರ್ಮಿಕರು ಪ್ರಾಣ ಭಯದಿಂದ ಓಡಿ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಆರ್‌ಆರ್‌ಟಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಕಾಡಿಗಟ್ಟಲು ಮುಂದಾದರು. ಈ ನಡುವೆ ಕಲ್ಲಳ–ತಟ್ಟಳ್ಳಿ ಮಾರ್ಗದಲ್ಲಿ ನಿಲ್ಲಿಸಿದ್ದ ಪ್ರವೀಣ ಎಂಬವರಿಗೆ ಸೇರಿದ ಜೀಪಿನ ಮೇಲೆ ಕಾಡಾನೆ ದಾಳಿ ನಡೆಸಿ ವಾಹನವನ್ನು ಜಖಂಗೊಳಿಸಿದೆ.

ಆನೆಯನ್ನು ಅಟ್ಟಲು ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೂ ದಾಳಿ ಮಾಡಲು ಯತ್ನಿಸಿದ್ದು, ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಂತರ ಆನೆಯನ್ನು ಕಾಡಿಗಟ್ಟುವಲ್ಲಿ ಸಿಬ್ಬಂದಿ ಯಶಸ್ವಿಯಾದರು.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ. ಆತಂಕ ಸೃಷ್ಟಿಸುತ್ತಿರುವ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಕಾರ್ಮಿಕ ಮುಖಂಡ ಮಣಿ ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !