ಹೊಸದಿಗಂತ ವರದಿ, ತುಮಕೂರು :
ಮನೆ ಮಾರಾಟ ಮಾಡುವುದಾಗಿ ನಂಬಿಸಿ ಮಹಿಳೆಯೊರ್ವಳು ಅಂಧ ದಂಪತಿಯಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ ಘಟನೆ ತುಮಕೂರು ಜಿಲ್ಲೆಯ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಂಧ ಅಣ್ಣಪ್ಪ ಗಾದ್ರಿ ಹಾಗೂ ಮಮತಾ ದಂಪತಿ ವಂಚನೆಗೊಳಗಾದ ಅಂಧ ದಂಪತಿ. ಶಿಲ್ಪಾ ಎಂಬಾಕೆಯಿಂದ ವಂಚನೆಗೆ ಒಳಗಾಗಿದ್ದಾರೆ. ಮೂಲತಃ ಚಿತ್ರದುರ್ಗದವರಾದ ಅಣ್ಣಪ್ಪ, ತುಮಕೂರಿನ ಗಾಂಧಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಣ್ಣಪ್ಪ ಎಸ್‌ಬಿಐ ಬ್ಯಾಂಕ್ ನೌಕರ, ಪತ್ನಿ ಮಮತಾ, ತುಮಕೂರು ಪಾಲಿಕೆಯ ನೌಕರಳಾಗಿದ್ದಾಳೆ. ಹಲವು ವರ್ಷಗಳಿಂದ ತುಮಕೂರಿನ ಗಾಂಧಿನಗರದ ಬಾಡಿಗೆ ಮನೆಯಲ್ಲಿದ್ದಾರೆ. ನಗರದಲ್ಲೊಂದು ಸ್ವಂತ ಸೂರು ಹೊಂದಬೇಕು ಎಂಬ ಕನಸು ಕಂಡಿದ್ದ ದಂಪತಿ ಇದೇ ವೇಳೆ ತುಮಕೂರಿನ ಚಂದ್ರಮೌಳೇಶ್ವರ ಬಡಾವಣೆ ನಿವಾಸಿಯಾಗಿರುವ ಶಿಲ್ಪಾ ಎಂಬಾಕೆ 60 ಲಕ್ಷ ರೂಪಾಯಿಗೆ ಮನೆ ಮಾರಾಟ ಮಾಡುವ ಬಗ್ಗೆ ತಿಳಿಸಿದ್ದಾರೆ.
ಆ ಮನೆ ಖರೀದಿಸಲು ಮುಂದಾಗಿದ್ದ ಅಣ್ಣಪ್ಪ ದಂಪತಿ 2022ರಲ್ಲಿ ಶಿಲ್ಪಾ ಮನೆ ಅಗ್ರಿಮೆಂಟ್ ಮಾಡಿಸಿಕೊಳ್ಳುವ ವೇಳೆ ದಂಪತಿಯಿಂದ 13 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಆದರೆ ಹಣ ಪಡೆದು ಬಳಿಕ ಮನೆಯನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವ ಆರೋಪಿ ಮಹಿಳೆ. ಇತ್ತ ಹಣ ವಾಪಸ್ ಕೊಡದೇ ಅತ್ತ ಮನೆಯೂ ಇಲ್ಲದೆ ವಂಚನೆ ಮಾಡಿದ್ದಾರೆ. ಕಳೆದೆರಡು ವರ್ಷಗಳಿಂದ ಹಣಕ್ಕಾಗಿ ಅಲೆದಾಡಿ ಸುಸ್ತಾಗಿ ಕಣ್ಣೀರುಡುತ್ತಿರುವ ಅಂಧ ದಂಪತಿ ಕಂಗಾಲಾಗಿದ್ದಾರೆ. ಅಣ್ಣಪ್ಪ ಕುಟುಂಬಕ್ಕೆ ಹಣ ಕೊಡದೇ ಫೋನ್ ಕರೆಗೂ ಸಿಗದೆ ತಲೆಮರೆಸಿಕೊಂಡು ಆರೋಪಿ ಮಹಿಳೆ ತಿರುಗಾಡುತ್ತಿದ್ದಾರೆ.
ಕ್ಯಾತಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿ, ಎಫ್.ಐ.ಆರ್. ದಾಖಲಿಸಿದ್ದಾರೆ. ಠಾಣೆಗೆ ಶಿಲ್ಪ ರನ್ನು ಕರೆಸಿದರೂ ಹಣ ವಾಪಸ್ಸು ಕೊಡಿಸದೇ ವಂಚನೆ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯವಹಿಸಿದ್ದು ಅನುಮಾನಗಳಿಗೆ ಕಾರಣವಾಗಿದೆ.