ಹೊಸದಿಗಂತ ವರದಿ, ಕುಮಟಾ:
ಕುಮಟಾದ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಮಕ್ಕಳನ್ನು ಬಸ್‌ನಿಲ್ದಾಣದಲ್ಲಿ ಬಿಟ್ಟು ಕುಮಟಾದ ಹೆಡ್‌ಬಂದರ್ ಬಳಿ ಸಮುದ್ರದ ಬಳಿ ತಾನು ತಂದಿದ್ದ ಸ್ಕೂಟಿ ಇಟ್ಟು ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದಂತೆ ನಾಟಕವಾಡಿದ್ದಾಳೆ.
ನಿವೇದಿತಾ ನಾಗರಾಜ ಭಂಡಾರಿ (೩೬) ಎಂಬ ಮಹಿಳೆ ನ.೨೫ ರಂದು ಕುಮಟಾದ ವನ್ನಳ್ಳಿ ಬೀಚ್‌ನಲ್ಲಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಕೊಂಡಿದ್ದಾಳೆ ಎಂಬ ಸುದ್ದಿ, ಆರಕ್ಷಕರು ಮಾತ್ರವಲ್ಲ ಇಡೀ ತಾಲೂಕು ಜನತೆಯನ್ನೇ ಸಂದಿಗ್ಧ ಪರಿಸ್ಥಿತಿಗೆ ನೂಕಿತ್ತು.
ಸಮುದ್ರದಲ್ಲಿ ಆಕೆ ವೇಲ್ ಬಿದ್ದು ತೇಲುತಿದ್ದಿದ್ದನ್ನು ಕಂಡು ಲೈಫ್ ಗಾರ್ಡ್‌ಗಳು, ಪೊಲೀಸರು ಸಮುದ್ರ ಜಾಲಾಡಿದ್ದಾರೆ. ಆದರೆ, ಶವ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪಿ.ಎಸ್.ಐ ನವೀನ್ ನೇತ್ರತ್ವದ ತಂಡ ಸಮುದ್ರ ಜಾಲಾಡುವ ಜೊತೆ ಬೇರೆ ರೀತಿಯಲ್ಲೂ ತನಿಖೆ ಕೈಗೊಂಡಿದ್ದರು.
ನಿವೇದಿತಾ ಡೆತ್‌ನೋಟ್ ಕೂಡಾ ಬರೆದಿಟ್ಟಿದ್ದಳು. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ಬೇರೆ ಯಾರೂ ಕಾರಣರಲ್ಲ. ನನ್ನ ಹೆಣ ನೋಡಲು ಇಷ್ಟ ಇರಲಿಲ್ಲ ಅಂತನೇ, ಸಿಗಲೇ ಬಾರದು ಅಂತ ಸಮುದ್ರದ ಮಡಿಲಿಗೆ ಹೋಗುತ್ತಿದ್ದೇನೆ. ಯಾರೂ ಹುಡುಕುವುದು ಬೇಡ ಸಿಗಲಿಲ್ಲ ಅಂತ ಎಂದು ನಿವೇದಿತಾ ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟು, ಅದನ್ನು ತನ್ನ ಸ್ಕೂಟಿಯಲ್ಲಿಯೇ ಇಟ್ಟಿದ್ದಳು.
ಕೊನೆಗೂ ಆಟೋ ಚಾಲಕನ ಮೂಲಕ ಈಗೆ ಬೇರೆಡೆ ಅಡಗಿರುವ ಕುರಿತು ಮಾಹಿತಿ ಕಲೆಹಾಕಿ ಬಲೆ ಬೀಸಿದಾಗ ಈಕೆ ಸಾವಿನ ನಾಟಕ ಆಡಿದ್ದು ಪತ್ತೆಯಾಯ್ತು. ತನಿಖೆ ಕೈಗೊಂಡಾಗ ತಾನು ಗಂಡನ ಮೇಲೆ ಕೋಪಕ್ಕೆ ಹೀಗೆ ಮಾಡಿದ್ದೇನೆ. ಹೀಗಾಗಿ ಆತನಿಗೆ ಬುದ್ದಿ ಕಲಿಸಲು ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇದರಿಂದಾಗಿ ಆತ್ಮಹತ್ಯೆ ಪ್ರಕರಣ ಸುಖಾಂತ್ಯ ಕಂಡಿದೆ.
ಆದರೆ ಪೊಲೀಸರು ,ರಕ್ಷಣೆ ಕಾರ್ಯದಲ್ಲಿ ದಿನವಿಡೀ ಸಮಯ ಕಳೆದ ಲೈಫ್ ಗಾರ್ಡಗಳ ಸಮಯ ವ್ಯರ್ಥ ಮಾಡಿದ್ದು ಮಾತ್ರ ದುರಂತವಾಗಿದೆ.