ಕೋಳಿಮೊಟ್ಟೆಗಾಗಿ ಹೊಡೆದಾಟ: ಮಹಿಳೆ ಸಾವು, ಇಬ್ಬರ ಸ್ಥಿತಿ ಗಂಭೀರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋಳಿಮೊಟ್ಟೆ ಹಂಚುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಗಲಾಟೆ ತಾರಕಕ್ಕೇರುತ್ತಿದ್ದಂತೆ ಒಂದು ಬಣ ಇನ್ನೊಂದು ಬಣದ ಮೇಲೆ ಗುಂಡು ಹಾರಿಸಿದೆ. ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ತೀರಾ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಗುರುತಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಬಿಹಾರದ ಔರಂಗಾಬಾದ್‌ನ ಖುದ್ವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೌದ್‌ನಗರದ ಬಿಡಿಒ ಸಹ ಪ್ರಭಾರಿ ವಲಯಾಧಿಕಾರಿ ಅರುಣ ಕುಮಾರ್ ಮಾತನಾಡಿ, ಎರವಲು ಪಡೆದ ಮೊಟ್ಟೆಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಉಭಯ ಪಕ್ಷಗಳ ನಡುವಿನ ಜಗಳ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು ಎಂದರು. ಇದೇ ವೇಳೆ ಗುಂಪಿನ ಸದಸ್ಯರು ಗುಂಡಿನ ದಾಳಿ ನಡೆಸಿದ್ದರಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇತರ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡ ಎಂಟು ಮಂದಿಯನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅರುಣಕುಮಾರ್ ತಿಳಿಸಿದ್ದಾರೆ. ಅವರಲ್ಲಿ ಶಂಭು ಚೌಧರಿ, ಉಮೇಶ್ ಚೌಧರಿ ಮತ್ತು ರಾಂಬಚನ್ ಚೌಧರಿ ಎಂಬ ಮೂವರನ್ನು ಬಂಧಿಸಲಾಗಿದೆ. ಉಳಿದ ಇಬ್ಬರಿಗೆ ಶೋಧ ನಡೆಸುತ್ತಿದ್ದು, ಅವರ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದರು. ಗಾಯಗೊಂಡವರಲ್ಲಿ ಧರ್ಮೇಂದ್ರ ರಾಮ್, ರೀಟಾ ದೇವಿ, ಕರಿಮಾನ್ ರಾಮ್, ಅಶೋಕ್ ರಾಮ್, ರಾಮಜನಮ್ ರಾಮ್, ಶಿವಾನಂದನ್ ರಾಮ್, ಪಂಕಜ್ ಕುಮಾರ್, ಕುಂದನ್ ಕುಮಾರ್ ಮತ್ತು ಇತರರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!