ನಂಜನಗೂಡು ತಾಲೂಕಿನಲ್ಲಿ ಹುಲಿ ದಾಳಿಗೆ ಮಹಿಳೆ ಬಲಿ!

ಹೊಸ ದಿಗಂತ ವರದಿ , ಮೈಸೂರು:

ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹುಲಿಗಳ ಅಟ್ಟಹಾಸ ಮುಂದುವರಿದಿದ್ದು, ಹುಲಿ ದಾಳಿಗೆ ಶುಕ್ರವಾರ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ನಂಜನಗೂಡ ತಾಲೂಕಿನ ಬಳ್ಳೂರುಹುಂಡಿ ಗ್ರಾಮದ ವಾಸಿಯಾದ ರತ್ನಮ್ಮ (55) ಕೋಂ ವೆಂಕಟಯ್ಯ ಎಂಬುವರು ಹುಲಿ ದಾಳಿಗೆ ಬಲಿಯಾದವರು.

ಇವರು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮಕ್ಕೆ ಹೊಂದಿಕೊoಡoತಿರುವ ಮಹದೇವ ನಗರ ಗ್ರಾಮದ ನರ್ಸರಿ ಸಮೀಪವಿರುವ ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಕುಳಿತಿದ್ದರು. ಈ ವೇಳೆ ಏಕಾಏಕಿ ದಾಳಿ ಮಾಡಿದ ಹುಲಿ ಆಕೆಯನ್ನು ಎಳೆದುಕೊಂಡು ಹೋಗಿದೆ.  ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಆಗಿಲ್ಲ. ಬಲವಾದ ಹೊಡೆತಕ್ಕೆ ಆಕೆಯ ಕುತ್ತಿಗೆ ಭಾಗಕ್ಕೆ ಬಲವಾದ ಏಟು ಬಿದ್ದಿದೆ. ನೆರೆಹೊರೆಯವರು ಕೂಗಿಕೊಂಡಾಗ ಎಳೆದುಕೊಂಡು ಹೋದ ಹುಲಿ ಕೊಂದು ಹಾಕಿದೆ. ಕಾಲು ಸೇರಿದಂತೆ ದೇಹದ ಕೆಲ ಭಾಗಗಳನ್ನು ತಿಂದು ಹಾಕಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಾದ ಪರಮೇಶ್ವರ ಹಾಗೂ ಎ ಟಿ ನಾರಾಯಣ ಅವರು ಸಿಬ್ಬಂದಿಗಳೊoದಿಗೆ ಹುಡುಕಾಟ ನಡೆಸಿದರು. ರತ್ನಮ್ಮ ದೇಹ ಅನತಿ ದೂರದಲ್ಲಿಯೇ ಪತ್ತೆಯಾಗಿದೆ. ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿಯೇ ದೇಹ ದೊರೆತಿದೆ. ದೇಹದ ಭಾಗವನ್ನು ಹುಲಿ ತಿಂದಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಈ ವೇಳೆ ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದರು. ನಂಜನಗೂಡು ತಾಲೂಕಿನಲ್ಲಿ ಹುಲಿಗಳ ಹಾವಳಿ ವಿಪರೀತವಾಗಿದೆ. ಈಗಾಗಲೇ ಕೆಲವರು ಹುಲಿ ದಾಳಿಗೆ ಬಲಿಯಾದರೆ, ಕೆಲವರು ಗಾಯಗೊಂಡಿದ್ದಾರೆ. ಜಾನುವಾರುಗಳು ಕೂಡ ಬಲಿಯಾಗುತ್ತಿವೆ. ಹುಲಿಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸುತ್ತಿದ್ದರೂ, ಇನ್ನೂ ಕೂಡ ಹುಲಿಯನ್ನು ಸೆರೆ ಹಿಡಿಯುತ್ತಿಲ್ಲ ಯಾಕೇ ಎಂದು ಹರಿಹಾಯ್ದರು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಅಧಿಕಾರಿಗಳು ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು, ಹುಲಿಯನ್ನು ಸೆರೆ ಹಿಡಿಯಲಾಗುವುದು ಎಂದು ಭರವಸೆ ನೀಡಿದರು.

ಒಂದು ತಿಂಗಳಲ್ಲಿ ಹುಲಿ ದಾಳಿಗೆ ನಾಲ್ವರು ಬಲಿ
ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಹುಲಿಗಳ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಮಹದೇವ ನಗರ ಗ್ರಾಮದ ಸಮೀಪ ವೀರಭದ್ರ ಭೋವಿ ಎಂಬ ದನ ಗಾಹಿ ಮೇಲೆ ದಾಳಿ ಹುಲಿ ಮಾಡಿತ್ತು. ಅಲ್ಲದೇ ಇನ್ನೊಬ್ಬ ವ್ಯಕ್ತಿಯನ್ನು ಕೊಂದು ಹಾಕಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಬಾಲಕನೊಬ್ಬನನ್ನು ಹುಲಿ ಬಲಿ ತೆಗೆದುಕೊಂಡಿತ್ತು. ಹುಣಸೂರು ತಾಲ್ಲೂಕಿನ ಹನಗೋಡು ಬಳಿ ರೈತನನ್ನು ಸಾಯಿಸಿತ್ತು. ಇದೀಗ ರತ್ನಮ್ಮ ಬಲಿಯಾಗಿದ್ದಾರೆ. ಇದರಿಂದಾಗಿ ಒಂದು ತಿಂಗಳ ಅಂತರದಲ್ಲಿಯೇ ಜಿಲ್ಲೆಯೊಳಗೆ ನಾಲ್ವರು ಹುಲಿ ದಾಳಿಗೆ ಬಲಿಯಾದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!