ಹೊಸದಿಗಂತ ವರದಿ ಹುಬ್ಬಳ್ಳಿ:
ದೆಹಲಿ ನಿರ್ಭಯ, ಹೈದರಾಬಾದ್ ಮರ್ಡರ್ ಹಾಗೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಯುವತಿಯ ಭೀಕರ ಕೊಲೆ ಆಧರಿಸಿ ನಿರ್ದೇಶಕ ವರುಣ ಗಂಗಾಧರ ಅವರ ‘ಹತ್ಯ’ ಸಿನಿಮಾ ರಾಜ್ಯದ್ಯಾಂತ ಮುಂದಿನ ತಿಂಗಳು ತೆರೆ ಕಾಣಲಿದೆ.
ಈ ಕುರಿತು ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾದ ಮಾಹಿತಿ ಹಂಚಿಕೊಂಡ ನಿರ್ದೇಶಕ ವರುಣ ಗಂಗಾಧರ, ಇದು ನನ್ನ ಮೊದಲ ಸಿನಿಮಾ ಆಗಿದೆ. ಹತ್ಯ ಸಸ್ಪೆನ್ಸ್, ತ್ರಿಲ್ಲರ್ ಸಿನಿಮಾವಾಗಿದ್ದು, ಇತ್ತೀಚೆಗೆ ಸಮಾಜದಲ್ಲಿ ನಡೆದ ಕೆಲ ಮಹಿಳೆಯ ಕೊಲೆಗಳಿಗೆ ಸಂಬಂಧಿಸಿದ್ದಾಗಿದೆ ಎಂದರು.
ಮಹಿಳೆಯ ಶೋಷಣೆಗೆ ಒಳಗಾದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬ ಕೆಲ ಸನ್ನಿವೇಶಗಳನ್ನು ತೋರಿಸಲಾಗಿದೆ. ಈ ಚಿತ್ರದ ನಾಯಕಿ ತನ್ನ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ನೋವನ್ನು ಯಾರ ಬಳಿ ಹೇಳಿಕೊಳ್ಳಲಾಗದೆ ಮನಸ್ಸಿನಲ್ಲೇ ಅನುಭವಿಸುತ್ತಾಳೆ. ಈ ಘಟನೆಯಿಂದ ಆಕೆಯ ಮನಸ್ಥಿತಿ ಬದಲಾಗುತ್ತದೆ. ಆನಂತರ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ ಇದೇ ಚಿತ್ರದ ಕಥಾಹಂದರ ಎಂದು ಹೇಳಿದರು.
ಸಿನಿಮಾದ ಚಿತ್ರೀಕರಣ ಗೋವಾ ಹಾಗೂ ಬೆಂಗಳೂರಿನಲ್ಲಿ ಮಾಡಲಾಗಿದೆ. ಸಾಗರಂ ವಲ್ಡ್ ಸಿನಿಮಾ ಲಾಂಛನದಲ್ಲಿ ರಾಮಲಿಂಗಂ, ಶ್ಯಾಮ್ ಹಾಗೂ ಗಂಗಾಧರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಅಲೆನ್ ಕ್ರಿಸ್ಟ ಸಂಗೀತ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ ಎಂದರು. ವಿಕಾಸ್ ಗೌಡ, ಕಾಮಿಕಾ ಆಂಚಲ್, ಹ್ಯಾರಿ ಜೋಶ್, ಸಂತೋಷ್ ಮೇದಪ್ಪ, ಶ್ಯಾಮ್, ನಾಗೇಶ್ ಮಯ್ಯ, ಹುಬ್ಬಳಿಯ ರಚಿಕೇತ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.