ಹೊಸದಿಗಂತ ವರದಿ,ವಿಜಯಪುರ:
ತನ್ನ ಸ್ನೇಹಿತನನ್ನು ಚಾಕುವಿನಿಂದ ಹತ್ಯೆ ಮಾಡಿ, ತಾನೂ ವಿಷ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಲಕ್ಷ್ಮೀ ಚಿತ್ರಮಂದಿರ ಎದುರಿನ ರಾಜಧಾನಿ ಲಾಡ್ಜ್ ನಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಾಂಡಾ ನಿವಾಸಿ ಸಿ.ಇಂದ್ರಕುಮಾರ ಕೊಲೆಯಾಗಿದ್ದು, ಇತನನ್ನು ಕೊಲೆ ಮಾಡಿದ ಇನ್ನೊಬ್ಬ (ಹೆಸರು ತಿಳಿದು ಬಂದಿಲ್ಲ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಜಧಾನಿ ಲಾಡ್ಜ್ ರೂಮ್ ನಂಬರ್ 114 ನಲ್ಲಿ ಎರಡು ಶವಗಳು ಪಕ್ಕ ಪಕ್ಕದಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಇಂದ್ರಕುಮಾರ ಎಂಬವನು ಮಾ. 22 ರಂದು ಲಾಡ್ಜ್ ಗೆ ಬಂದು ಆಧಾರ ಕಾರ್ಡ್ ತೋರಿಸಿ ರೂಮ್ ನಂ. 114 ಪಡೆದು ಕೊಂಡಿದ್ದ. ಬಳಿಕ ಇತನ ರೂಮ್ ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವುದು ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ತಿಳಿದು ಬಂದಿಲ್ಲ.
ಎರಡು ದಿನ ರೂಮ್ ಬಾಗಿಲು ಸಹ ತೆರೆದಿರಲಿಲ್ಲ. ಇಂದು ಬೆಳಗ್ಗೆ ರೂಮ್ ನಿಂದ ಕೆಟ್ಟ ವಾಸನೆ ಬರಲು ಆರಂಭಿಸಿದಾಗ ಲಾಡ್ಜ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ ತೆಗೆದಾಗ ಕೊಲೆ ನಡೆದಿರುವದು ಬೆಳಕಿಗೆ ಬಂದಿದೆ.
ಇಂದ್ರಕುಮಾರ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಆತನ ಮೇಲೆ ಕೊಲೆ ಮಾಡಿದ ಇನ್ನೊಬ್ಬ ವ್ಯಕ್ತಿಯ ಶವ ಬಿದ್ದಿರುವುದು ಪತ್ತೆಯಾಗಿದೆ.
ಇದರ ಜತೆ ರೂಮ್ ನಲ್ಲಿ ಒಂದು ಬೈಕ್ ಕೀ ಪತ್ತೆಯಾಗಿದ್ದು, ಆ ಬೈಕ್ ವಿಜಯಪುರ ತಾಲೂಕಿನ ಅರಕೇರಿ ನಿವಾಸಿಯೊಬ್ಬರ ಹೆಸರಿನಲ್ಲಿ ರಿಜಿಸ್ಟರ್ ಹೊಂದಿದೆ. ಆ ವ್ಯಕ್ತಿ ಈ ಇಬ್ಬರ ಸಾವಿಗೆ ಸಂಬಂಧ ಇರಬಹುದಾ ? ಎನ್ನುವುದು ತನಿಖೆಯಿಂದ ತಿಳಿದು ಬರಬೇಕು.
ಅಲ್ಲದೆ ಇದು ಒಂದು ಕೊಲೆ ಹಾಗೂ ಇನ್ನೊಂದು ಆತ್ಮಹತ್ಯೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನಗಳು, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಸ್ಥಳಕ್ಕೆ ಸ್ವತಃ ಎಸ್ಪಿ ಆನಂದಕುಮಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಸದ್ಯ ಇಬ್ಬರ ಸಾವಿನ ನಿಗೂಢತೆ ಭೇದಿಸಲು ತನಿಖೆ ಆರಂಭಿಸಲಾಗಿದ್ದು, ಸಾವಿಗೀಡಾಗಿರುವ ಇಂದ್ರಕುಮಾರನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.