FOLLOWUP | ತುಮಕೂರಿನಲ್ಲಿ ಕಾಲು ಜಾರಿ ಬಿದ್ದಿದ್ದ ಯುವತಿ ಪತ್ತೆ, ಪೊಟರೆಯಿಂದ ಉಳಿದ ಜೀವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂದಾರಗಿರಿ ಬೆಟ್ಟದ ಹಿಂಭಾಗದ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಸಂಜೆ ಸೆಲ್ಫಿ ತೆಗೆದುಕೊಳ್ಳುವಾಗ ಕೊಚ್ಚಿ ಹೋಗಿದ್ದ ಹಂಸ (20)ಎಂಬ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಲಾಗಿದೆ.

ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಕೆಳಕ್ಕೆ ಬಿದ್ದು ಪೊಟರೆಯೊಂದರಲ್ಲಿ ಸಿಲುಕಿಕೊಂಡಿದ್ದಳು. ಸೋಮವಾರ ಆಕೆಯನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಸುಮಾರು 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕಿ ಬಂದಿದ್ದಾರೆ. ಗುಬ್ಬಿ ತಾಲೂಕು ಶಿವರಾಂಪುರದ ನಿವಾಸಿ ಸೋಮನಾಥ್‌ ಅವರ ಪುತ್ರಿ ಹಂಸ ಅವರು ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾರೆ.

ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಹೋಗಿ, ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತಡ ರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದರೆ ಆಕೆ ಸಿಲುಕಿರುವ ಜಾಗಕ್ಕೆ ಹೋಗುವುದು ಸವಾಲಿನ ಕೆಲಸವಾಗಿತ್ತು. ಹತ್ತಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಕೋಡಿ ಹರಿಯುವ ಭಾಗದಲ್ಲಿ ಸುಮಾರು ಹದಿನೈದು ಅಡಿ ಆಳದಲ್ಲಿರುವ ಕಲ್ಲಿನ ಬಂಡೆ ನಡುವೆ ಹಂಸ ಸಿಲುಕಿರಬಹುದು ಎಂದು ಶಂಕಿಸಲಾಗಿತ್ತು. ಅದೀಗ ನಿಜವಾಗಿದೆ. ಕೋಡಿ ನೀರು ರಭಸದಿಂದ ಹರಿಯುತ್ತಿರುವ ಕಾರಣ, ಆಕೆಯ ಪತ್ತೆ ಹಾಗೂ ರಕ್ಷಣೆಗೆ ತೊಡಕಾಗಿತ್ತು.

ಕೆರೆ ಕೊಡಿಯ ನೀರನ್ನು ಬೇರೆಡೆಗೆ ತಿರುಗಿಸುವ ಮೂಲಕ, ಆಕೆ ಸಿಲುಕಿದ್ದ ಕಲ್ಲಿನ ಪೊಟರೆಯ ಜಾಗಕ್ಕೆ ನೀರು ಹೋಗದಂತೆ ನೋಡಿಕೊಂಡು, ಬಳಿಕ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಭಾನುವಾರ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ಸಿಬ್ಬಂದಿ, ಸೋಮವಾರ ಘಟನೆ ನಡೆದ ಮಂದಾರಗಿರಿ ಬೆಟ್ಟದ ಬಳಿ ಮೈದಾಳ ಕೆರೆ ಕೋಡಿ ಸ್ಥಳಕ್ಕೆ ಮತ್ತೆ ತೆರಳಿದ್ದು, ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಪುನಾರಂಭಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!