ಹೊಸದಿಗಂತ ವರದಿ, ಮಂಡ್ಯ:
ಹಳೇ ದ್ವೇಷ ಹಾಗೂ ರೌಡಿ ಎಂಬ ಹವಾ ಸೃಷ್ಟಿಸಲು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಪುಡಿರೌಡಿಗಳು ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಾರಂತ್ (29) ಹಲ್ಲೆಗೊಳಗಾದ ಯುವಕನಾಗಿದ್ದು, ಮಾದ ಅಲಿಯಾಸ್ ಮಾದಪ್ಪ ಮತ್ತು ಅವರ ತಂಡ ಹಲ್ಲೆ ನಡೆಸಿದ ಪುಡಿರೌಡಿಗಳಾಗಿದ್ದಾರೆ.
ಶಾರಂತ್ ವಿ.ಸಿ. ಫಾರಂನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುವುದರ ಜತೆಗೆ ತನ್ನ ಜಮೀನನ್ನು ನೋಡಿಕೊಂಡು ಹೊಳಲು ಗ್ರಾಮದಲ್ಲೇ ವಾಸವಾಗಿದ್ದನು.
ಗುರುವಾರ ಹುಟ್ಟುಹಬ್ಬ ಇದ್ದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡು ಗ್ರಾಮದ ವಿಶ್ವೇಶ್ವರಯ್ಯ ವೃತ್ತದಲ್ಲಿ ನಿಂತಿದ್ದನು. ಈ ವೇಳೆ ಎರಡು ಬೈಕ್ನಲ್ಲಿ ಬಂದ ಮಾದ, ಚಿಂಟು, ತರುಣ್, ಸುಶಾಂತ್ ಹಾಗೂ ಚಂದನ್ ಅವರು ಮಾದನನ್ನು ಬಾಸ್ ಎಂದು ಹೇಳು, ಇಲ್ಲಿದ್ದರೆ ಸರಿಯಿರಲ್ಲ ಎಂದು ಹೆದರಿಸಿ, ಶಾರಂತ್ಗೆ ಲಾಂಗ್, ಡ್ರಾಗರ್ ತೋರಿಸಿ ದರ್ಪ ಮೆರೆದಿದ್ದಾರೆ.
ಇದಕ್ಕೆ ಶಾರಂತ್ ಸಹ ಅವಾಜ್ ಹಾಕಿದಾಗ ಲಾಂಗ್ ಬೀಸಿದ್ದಾರೆ. ಇದರಿಂದ ಶಾರಂತ್ನ ಕಣ್ಣಿನ ಉಬ್ಬು, ಬಾಯಿಗೆ ಗಂಭೀರ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾನೆ.
ಈ ಹಿಂದೆಯೂ ಸಹ ಮಾದನನ್ನು ಬಾಸ್ ಎನ್ನುವಂತೆ ಆತನ ಸ್ನೇಹಿತರು ಅವಾಜ್ ಹಾಕಿದ್ದರು. ಇದಕ್ಕೆ ಶಾರಂತ್ ಅವನ್ ಯಾವನೋ ಬಾಸ್ ಎಂದು ಟಾಂಗ್ ನೀಡಿದ್ದಕ್ಕಾಗಿ ಗಲಾಟೆ ನಡೆದು ತಣ್ಣಗಾಗಿತ್ತು.
ಅದೇ ದ್ವೇಷ ಇಟ್ಟುಕೊಂಡು ಶಾರಂತ್ ಮೇಲೆ ಮಾದ ಮತ್ತು ಆತನ ತಂಡ ಹುಟ್ಟುಹಬ್ಬದ ದಿನವೇ ಮತ್ತೆ ಕ್ಯಾತೆ ತೆಗೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.
ಗಾಯಗೊಂಡಿರುವ ಶಾರಂತ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಹಲ್ಲೆ ನಡೆಸಿ ಪರಾರಿಯಾಗಿರುವ ಮಾದ ಮತ್ತು ತಂಡವನ್ನು ಬಂಧಿಸಲು ಗ್ರಾಮಾಂತರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.