ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ನೂರು ದಿನ: ನಿಮ್ಮ ಸಾಧನೆ ಏನು ಎಂದು ಕೇಳಿದ ಆಮ್‌ ಆದ್ಮಿ ಪಕ್ಷ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದು ನೂರು ದಿನಗಳು ಪೂರೈಸಿದೆ , ಈ ಹಿನ್ನೆಲೆ ಆಮ್‌ ಆದ್ಮಿ ಪಕ್ಷದ (AAP) ಸರಕಾರದ ಮುಂದೆ ಪ್ರಶ್ನಿಗಳನ್ನು ಇಟ್ಟಿದೆ.

ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ಏಕೆ ಏನು ಮಾತನಾಡುತ್ತಿಲ್ಲ? ಬೆಂಗಳೂರಿಗೆ ಅಗತ್ಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವೇನು?. ಮೇಕೆದಾಟು ಯೋಜನೆ ಅನುಷ್ಠಾನ ಯಾವಾಗ ಎಂದು ಪ್ರಶ್ನೆ ಮಾಡಿದೆ.
ಹೇಳಿಕೆ ಬಿಡುಗಡೆ ಮಾಡಿದ ಎಎಪಿ ರಾಜ್ಯ ಉಪಾಧ್ಯಕ್ಷ ಮೋಹನ್‌ ದಾಸರಿ ಅವರು, ಕಾಂಗ್ರೆಸ್ ಸಂಭ್ರಮಾಚರಣೆ ಮಾಡಲು ಯಾವ ಸಾಧನೆ ಮಾಡಿದೆ?ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಮತ್ತು ಗೃಹಜ್ಯೋತಿ ಯೋಜನೆಯ ವಿದ್ಯುತ್‌ ಉಚಿತ ಸೌಲಭ್ಯವನ್ನು ಹೊರತು ಪಡಿಸಿ ಬೇರೆ ಏನು ಮಾಡಿದ್ದಾರೆ ಎಂದು ಕೇಳಿದರು.

ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಘೋಷಿಸಿ ನುಡಿದಂತೆ ನಡೆಯುವ ಸರ್ಕಾರ ಎಂದಿದ್ದರು. ಅಧಿಕಾರಕ್ಕೆ ಬಂದ ಬಳಿಕ ತಮ್ಮದೇ ನುಡಿಯನ್ನು ಅನುಸರಿಸುತ್ತಿಲ್ಲ ಏಕೆ?ತರಾಟೆಗೆ ತೆಗೆದುಕೊಂಡರು.

ಈ ಸರಕಾರ ರಾಜ್ಯದಲ್ಲಿನ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಬೆಂಗಳೂರಲ್ಲಿ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚಾಗುತ್ತಲೇ ಇದೆ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ಎಂದು ಸುತ್ತಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರೇನು ವಿರೋಧ ಪಕ್ಷದಲ್ಲಿಲ್ಲ. ತಮ್ಮದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದಾರೆ.ಆದ್ರೆ ಬೆಂಗಳೂರಿನ ಸಮಸ್ಯೆ ಆಲಿಸುವ ನಾಟಕವಾಡುತ್ತಾರೆ.

ಬೆಂಗಳೂರಿನ ಸಮಸ್ಯೆಗಳೇನು ಎಂಬ ಅರಿವಿದ್ದುಕೊಂಡು ಪುನಃ ಆಲಿಸುವ ನಾಟಕ ಏಕೆ ಮಾಡುತ್ತಿದ್ದೀರಿ? ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಮೋಹನ್‌ ದಾಸರಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಮಳೆಯೇ ಇಲ್ಲದ ಪರಿಸ್ಥಿತಿ ಇದೆ. ರಾಜ್ಯದ ರೈತರ ಸಂಕಷ್ಟದ ದಿನಗಳನ್ನು ಲೆಕ್ಕಿಸದೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಲಾಗುತ್ತಿದೆ. ನಾಡು, ನುಡಿ, ಜಲಕ್ಕೆ ಬದ್ಧ ಎಂದರೆ ಇದೇನಾ? ಎಂದು ಪ್ರಶ್ನಿಸಿದರು.

ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್‌, ಪೇಸಿಎಂ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಗುತ್ತಿಗೆದಾರರ ಬಾಕಿ ಪಾವತಿಗೆ 20% ಕಮಿಷನ್‌ ಕೇಳುತ್ತಿರುವ ಆರೋಪ ಕೇಳಿಬಂದಿದೆ. ಡಿ.ಕೆ.ಶಿವಕುಮಾರ್‌ ವಿರುದ್ಧವೇ ದೂರುಗಳು ವ್ಯಕ್ತವಾಗಿವೆ. ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ತಿಂಗಳಿಗೆ ತಲಾ 6 ರಿಂದ 8 ಲಕ್ಷ ರೂ. ಕಮಿಷನ್ ಅನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಕೇಳುತ್ತಿದ್ದಾರೆ ಎಂಬ ಆರೋಪವು ಇದೆ.ಕೇವಲ ಸರ್ಕಾರ ಬದಲಾಗಿದೆ, ಆದರೆ ಭ್ರಷ್ಟಾಚಾರ, ಕಮಿಷನ್‌ ದಂಧೆ, ವರ್ಗಾವಣೆ ದಂಧೆ ಎಲ್ಲವೂ ಮೊದಲಿನಂತೆ ಮುಂದುವರಿದಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಶಾಸಕರು ದೂರುತ್ತಿದ್ದಾರೆ ಎಂದು ಅವರು ವಿವರಿಸಿದರು.

ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟ ದುಡ್ಡನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಏಕೆ? ಅಧಿಕಾರ ಹಿಡಿಯಲೇ ಬೇಕು ಎಂಬ ದುರಾಸೆಗೆ ಅವೈಜ್ಞಾನಿಕವಾಗಿ, ಅಧ್ಯಯನ ನಡೆಸದೆ ಏಕಾಏಕಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿರುವುದೇ ನಿಮ್ಮ ನೂರು ದಿನದ ಸಾಧನೆಯೇ? ಎಂದು ಕಿಡಿಕಾರಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!