ತುಳುನಾಡಿನ ಜನರು ಶ್ರಾವಣ ಮಾಸದ ಪ್ರಾರಂಭಕ್ಕೂ ಮೊದಲು ಕರ್ಕಾಟಕ ಮಾಸದ ಅಮವಾಸ್ಯೆಯಂದು ಆಟಿ ಅಮವಾಸ್ಯೆಯನ್ನು ಆಚರಿಸುತ್ತಾರೆ. ಈ ಹಬ್ಬವು ಧಾರ್ಮಿಕ ಆಚರಣೆ ಮಾತ್ರವಲ್ಲದೇ, ಆರೋಗ್ಯ ಕಾಪಾಡುವ ಸಾಂಪ್ರದಾಯಿಕ ಪದ್ದತಿಗೂ ಗುರುತಾಗಿದೆ. ತುಳುನಾಡಿನಲ್ಲಿ ಆಟಿ ತಿಂಗಳ ಅಮವಾಸ್ಯೆ ದಿನದಂದು ಪಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯ ಕುಡಿಯುವ ಸಂಪ್ರದಾಯ ಹಳೆಯ ಕಾಲದಿಂದಲೂ ರೂಢಿಯಲ್ಲಿದೆ. ಜನರು ಈ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ, ನಂತರ ಮೆಂತ್ಯ ಗಂಜಿ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಗುಟ್ಟು.
ಪಾಲೆ ಮರದ ಕಷಾಯದ ಪವಿತ್ರತೆ
ಅಮವಾಸ್ಯೆಯಂದು ಹಾಲೆ ಮರದ ತೊಗಟೆಯಲ್ಲಿರುವ ಔಷಧೀಯ ಶಕ್ತಿಗಳು ಶ್ರೇಷ್ಠವಾಗಿರುತ್ತವೆ ಎಂಬ ನಂಬಿಕೆಯಿದೆ. ಈ ದಿನವೇ ತಯಾರಿಸಿದ ಕಷಾಯ ಸೇವನೆಯು ಹತ್ತಿರದ ದಿನಗಳಲ್ಲಿ ಸಂಭವಿಸಬಹುದಾದ ದೇಹದ ವ್ಯಾಧಿಗಳನ್ನು ತಡೆಯಲು ಸಹಾಯಮಾಡುತ್ತದೆ.
ಜುಲೈ ತಿಂಗಳಲ್ಲಿ ಸುರಿಯುವ ನಿರಂತರ ಮಳೆಯ ಕಾರಣ ದೇಹದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಈ ಸಮಯದಲ್ಲಿ ಕಷಾಯ ಸೇವನೆಯು ಜ್ವರ, ಹೊಟ್ಟೆ ನೋವು, ಭೇದಿ ಮತ್ತು ಚರ್ಮ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.
ಕಷಾಯ ತಯಾರಿ ವಿಧಾನ
ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಕತ್ತರಿಸಿ, ಬೆಳ್ಳುಳ್ಳಿ, ಮೆಣಸು, ಅರಿಶಿಣ ಸೇರಿಸಿ ಅರೆಯಲಾಗುತ್ತದೆ. ಆ ರಸಕ್ಕೆ ಬೆಣಚು ಕಲ್ಲು ಹಾಕಿ ವಿಷಾಂಶ ನಿವಾರಣೆ ಮಾಡುತ್ತಾರೆ. ನಂತರ ಬೆಲ್ಲ ಸೇರಿಸಿ ಈ ಕಷಾಯವನ್ನು ಕುಡಿಯುತ್ತಾರೆ.
ಈ ಸಂಪ್ರದಾಯ ಕೇವಲ ಆರೋಗ್ಯ ರಕ್ಷಣೆಗಾಗಿ ಮಾತ್ರವಲ್ಲದೇ, ತಲೆಮಾರುಗಳಿಂದ ಬಂದ ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಇಂದಿನ ದಿನದಲ್ಲಿಯೂ ಈ ಆಚರಣೆ ಜೀವಂತವಾಗಿರುವುದು ತುಳುನಾಡಿನ ಸಾಂಸ್ಕೃತಿಕ ಶಕ್ತಿ ಎಂದರು ತಪ್ಪಾಗಲಾರದು.