ಹೊಸದಿಗಂತ ಡಿಜಿಟಲ್ ಡೆಸ್ಕ್:
ತಜಕಿಸ್ತಾನದ ಗಾಯಕ, ರಿಯಾಲಿಟಿ ಸ್ಟಾರ್ ಅಬ್ದು ರೋಜಿಕ್ ಅವರನ್ನು ಶನಿವಾರ ಮುಂಜಾನೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಂಧನದ ಕುರಿತು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ಕಂಪನಿ ಖಲೀಜ್ ಧೃಡಪಡಿಸಿದೆ. 21 ವರ್ಷದ ಅಬ್ದು ಮಾಂಟೆನೆಗ್ರೊದಿಂದ ದುಬೈಗೆ ಬಂದಿಳಿದ ಸ್ವಲ್ಪ ಸಮಯದ ನಂತರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಬಂಧನದ ಹಿಂದಿನ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ರೋಜಿಕ್ ತಂಡದ ಪ್ರತಿನಿಧಿಯೊಬ್ಬರು, ಕಳ್ಳತನದ ಆರೋಪದ ಮೇಲೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ದುಬೈ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಹಾರ್ಮೋನ್ ಕೊರತೆಯಿಂದಾಗಿ ಮೂರು ಅಡಿಗಿಂತ ಸ್ವಲ್ಪ ಹೆಚ್ಚು ಎತ್ತರವಿರುವ ತನ್ನ ವಿಶಿಷ್ಟ ನಿಲುವಿನಿಂದ ಜಾಗತಿಕ ಗಮನ ಸೆಳೆದ ರೋಜಿಕ್, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಅತ್ಯಂತ ಗುರುತಿಸಬಹುದಾದ ಯುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಯುಎಇ ಗೋಲ್ಡನ್ ವೀಸಾ ಪಡೆದ ಅಬ್ದು, ಹಲವಾರು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಸಂಗೀತ, ಮನರಂಜನೆ, ಬಾಕ್ಸಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಬಿಗ್ ಬಾಸ್ 16 ರಲ್ಲಿಯೂ ಅಬ್ದು ರೋಜಿಕ್ ಭಾಗವಹಿಸಿದ್ದರು. ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಬಾಕ್ಸಿಂಗ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ತಮ್ಮ ರೆಸ್ಟೋರೆಂಟ್ ಬ್ರ್ಯಾಂಡ್ ಹಬೀಬಿಯನ್ನು ಪ್ರಾರಂಭಿಸಿದ್ದಾರೆ.