ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿತು. ಇದ್ರಲ್ಲಿ ತನ್ನ ಡೆಬ್ಯೂ ಮ್ಯಾಚ್ನಲ್ಲಿಯೇ ಡಕ್ ಔಟ್ ಆಗಿ ಪೆವಿಲಿಯನ್ನತ್ತ ಸಾಗಿದ ಯುವ ಬ್ಯಾಟರ್ ಅಭಿಷೇಕ್ ಶರ್ಮ ಇಂದು (ಜು.07) ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಜಿಂಬಾಬ್ವೆ ಬೌಲರ್ಗಳಿಗೆ ಬೆವರಿಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಟೀಮ್ ಇಂಡಿಯಾ, ಜಿಂಬಾಬ್ವೆ ತಂಡಕ್ಕೆ ಬೌಲಿಂಗ್ ಮಾಡುವಂತೆ ತಿಳಿಸಿತು. ಅದರಂತೆಯೇ ಮೊದಲ ಬೌಲ್ ಮಾಡಿದ ಜಿಂಬಾಬ್ವೆ ವಿರುದ್ಧ ಕ್ಯಾಪ್ಟನ್ ಶುಭಮನ್ ಗಿಲ್ ಅಬ್ಬರಿಸುವಲ್ಲಿ ವಿಫಲರಾದರು. 4 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ, ಔಟ್ ಆದ ಗಿಲ್, ತಂಡಕ್ಕೆ ಆಸರೆಯಾಗಿ ನಿಲ್ಲಲಿಲ್ಲ. ಇನ್ನು ನಾಯಕನ ಜತೆ ಓಪನಿಂಗ್ ಬಂದ ಶರ್ಮ, ಕೇವಲ 47 ಎಸೆತಗಳಲ್ಲಿ 100 ಸಿಡಿಸಿದ ಅಭಿಷೇಕ್, ಏಳು ಬೌಂಡರಿ ಮತ್ತು 8 ಸಿಕ್ಸರ್ಗಳನ್ನು ಬಾರಿಸಿದರು.
ತಂಡದ ಪರ ಭರ್ಜರಿ ಶತಕ ಸಿಡಿಸಿದ ಅಭಿಷೇಕ್, ಈ ಮೂಲಕ ಸಖತ್ ಕಮ್ಬ್ಯಾಕ್ ಮಾಡಿದ್ದಾರೆ. ಅಭಿಷೇಕ್ ಅಬ್ಬರದ ಬೆನ್ನಲ್ಲೇ ರುತುರಾಜ್ ಗಾಯಕ್ವಾಡ್ ಕೂಡ ಆಕರ್ಷಕ ಇನ್ನಿಂಗ್ಸ್ ಕೊಡುಗೆ ನೀಡಿದ್ದು, 45 ಎಸೆತಗಳಲ್ಲಿ 72* ರನ್ ಗಳಿಸಿದರು.