ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಆರಂಭಕ್ಕೂ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಫಾರ್ಮ್ ತೋರಿದ್ದು, ಎದುರಾಳಿ ತಂಡಗಳಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಅಭ್ಯಾಸ ಪಂದ್ಯದಲ್ಲೇ ಸಿಡಿಲಾಟ ನಡೆಸಿದ ಅವರು 94 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿ ಗಮನ ಸೆಳೆದಿದ್ದಾರೆ.
ತಮ್ಮ ತವರು ಮೈದಾನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ತಂಡದೊಳಗಿನ ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇಶಾನ್ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಅವರು ಆರಂಭದಿಂದಲೇ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು. ಇಶಾನ್ ಕಿಶನ್ ಕಡಿಮೆ ಮೊತ್ತಕ್ಕೆ ಔಟಾದರೂ, ಅಭಿಷೇಕ್ ಏಕಾಂಗಿಯಾಗಿ ತಂಡವನ್ನು ಮುನ್ನಡೆಸಿದರು.
ಇದನ್ನೂ ಓದಿ:
ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಯ ಮೂಲಕ ಕೇವಲ 42 ಎಸೆತಗಳಲ್ಲಿ 94 ರನ್ ಗಳಿಸಿ ಶತಕದಂಚಿನಲ್ಲಿ ಔಟಾದರು. ಅವರ ಸ್ಫೋಟಕ ಆಟದಿಂದ ಎಸ್‌ಆರ್‌ಎಚ್ ಎ ತಂಡ 21 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 253 ರನ್‌ಗಳ ಭಾರೀ ಮೊತ್ತ ಕಲೆಹಾಕಿತು.
ಹೆನ್ರಿಕ್ ಕ್ಲಾಸೆನ್ ಕೂಡ ಉತ್ತಮ ಬೆಂಬಲ ನೀಡಿದ್ದು, ಮಧ್ಯಮ ಕ್ರಮದಲ್ಲಿ ರನ್ ವೇಗ ಹೆಚ್ಚಿಸಿದರು. ಒಟ್ಟಾರೆ ಈ ಅಭ್ಯಾಸ ಪಂದ್ಯದಲ್ಲಿ ಸನ್‌ರೈಸರ್ಸ್ ಬ್ಯಾಟಿಂಗ್ ಬಲ ಸ್ಪಷ್ಟವಾಗಿ ಹೊರಹೊಮ್ಮಿದೆ.
ಇನ್ನು ಐಪಿಎಲ್ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಭಿಷೇಕ್ ಶರ್ಮಾ ಇದೇ ಫಾರ್ಮ್ ಮುಂದುವರಿಸುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.



