ಹೊಸ ದಿಗಂತ ವರದಿ, ಹುಬ್ಬಳ್ಳಿ:
ಸನಾತನ ಧರ್ಮದ ನಿರ್ಮೂಲನೆ ಮಾಡಬೇಕು ಎಂಬುವುದು ಐ.ಎನ್.ಡಿ.ಐ.ಎ ಎಂದು ಸೇರಿರುವ ವಿರೋಧ ಪಕ್ಷಗಳ ಹಿಡನ್ ಅಂಜೆಂಡ್ ಆಗಿದೆ. ಚುನಾವಣೆ ಸಮಿಪಿಸುತ್ತಿರುವುದರಿಂದ ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ವಿರೋಧ ಪಕ್ಷದ ವಿರುದ್ಧ ಹರಿಹಾಯ್ದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ವಿರೋಧ ಪಕ್ಷಗಳು ಸನಾತ ಧರ್ಮದ ಬಗ್ಗೆ ಮೊದಲು ಅರಿಯಬೇಕು. ಇದಕ್ಕೆ ಸಾವಿರಾರೂ ವರ್ಷದ ಇತಿಹಾಸವಿದೆ. ದೇಶದ ಮೇಲೆ ಎಷ್ಟೋ ಜನರು ದಾಳಿ ನಡೆಸಿದರೂ ಸಹ ಸನಾತ ಧರ್ಮದ ಅಳಿಸಲು ಸಾಧ್ಯವಾಗಿಲ್ಲ ಎಂದರು.
ಪ್ರತಿಯೊಬ್ಬ ವ್ಯಕ್ತಿ ಹೆಸರಲ್ಲಿ ಸನಾತನ ಧರ್ಮದ ಬಗ್ಗೆ ಗೊತ್ತಾಗುತ್ತದೆ. ಧರ್ಮ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಪಿಎಚ್‌ಡಿ ಮಾಡಲಿ. ಇದು ಚುನಾವಣೆಯ ಗಿಮಿಕ್ ಆಗಿದೆ. ಸದ್ಯ ವಿದೇಶಿಗಳು ಭಾರತೀಯ ಸಂಸ್ಕೃತಿ ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ತೃಷ್ಟೀಕರಣಕ್ಕಾಗಿ ವಿರೋಧ ಪಕ್ಷಗಳು ಹೀಗೆ ಮಾತನಾಡುತ್ತಿವೆ. ಇದರಿಂದ ಅವರಿಗೆ ಏನು ಸಾಸಲು ಆಗಲ್ಲ ಎಂದು ಹೇಳಿದರು.
ಬಹುಕಾಲದಿಂದ ಭಾರತ ಎನ್ನುವುದು ಇದೆ. ಅದನ್ನು ಅಕೃತಗೊಳಿಸಲಾಗುತ್ತಿದೆಯಷ್ಟೇ. ಇಂಡಿಯಾ ಪದ ಬಳಕೆಯೊಂದಿಗೆ ಕಾಂಗ್ರೆಸ್ ಗುಲಾಮರಾಗಿಯೇ ಇರಬೇಕೆಂದು ಬಯಸುತ್ತಿದೆ. ಭಾರತ ಪದ ಬಳಕೆ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.
ಬಿಜೆಪಿ ತೊರೆಯುವಾಗ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಸಮಾಜವನ್ನು ಕೇಳಿ ಹೋಗಿದ್ದಾರೆ ಎಂದು ಪ್ರಶ್ನಿಸಿದ ಮಹೇಶ ಟೆಂಗಿನಕಾಯಿ, ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ. ಕೆಲವರು ತಮಗೆ ಅನ್ಯಾಯವಾದರೆ ಸಮಾಜಕ್ಕೆ ಅನ್ಯಾಯ ಎಂದು ಭಾವಿಸಿದ್ದು, ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಲಿಂಗಾಯತರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು.
ಯಾರೋ ಒಬ್ಬರು ಪಕ್ಷದ ಬಗ್ಗೆ ಮಾತನಾಡಿದರೆ ಅದನ್ನು ಭಿನ್ನಮತ ಎನ್ನುವುದಿಲ್ಲ. ಪಕ್ಷದ ಬೆಳವಣಿಗೆ ಕುರಿತು ಮಾತನಾಡಿರುವ ಪಕ್ಷದ ಎಂಎಲ್‌ಸಿ ಪ್ರದೀಪ್ ಶೆಟ್ಟರಗೆ ಏನಾದರೂ ಸಮಸ್ಯೆ ಇದ್ದರೆ ಅವರ ಜತೆ ಮಾತನಾಡಿ ಚರ್ಚಿಸಿ ಬಗೆ ಹರಿಸುತ್ತೇವೆ. ಪಕ್ಷವು ಪ್ರತಿಯೊಂದನ್ನೂ ಗಮನಿಸುತ್ತಿದೆ. ಲೋಪ ಇರುವಲ್ಲಿ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಬಕೆಟ್ ಹಿಡಿಯುವವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಶಾಸಕ ಟೆಂಗಿನಕಾಯಿ, ಯಾರದೂ ಬಕೆಟ್ ಹಿಡದಿಲ್ಲ. ಅಂತಹ ಅನಿವಾರ್ಯತೆ ಇಲ್ಲ. ನಾನು ಬಕೆಟ್ ಹಿಡಿದಿರೋದು ಬಿಜೆಪಿ ಪಕ್ಷಕ್ಕೆ ಮಾತ್ರ. ಯಾವುದೋ ವ್ಯಕ್ತಿಗೆ ಅಲ್ಲ. ನನ್ನ ಜೀವಮಾನದಲ್ಲಿ ಟಿಕೆಟ್ ಹಿಡಿಯುವ ಪ್ರಶ್ನೆಯೇ ಇಲ್ಲ. ವ್ಯಕ್ತಿ ಪೂಜೆ ಮಾಡುವುದಿಲ್ಲ, ಪಕ್ಷ ಪೂಜೆ ಮಾಡುತ್ತೇನೆ ಎಂದು ಹೇಳಿದರು.