ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ ವಿದೇಶಗಳಲ್ಲಿಯೂ ಸಖತ್ ಸದ್ದು ಮಾಡಿರುವ ಕನ್ನಡದ ‘ಕಾಂತಾರ ಒಂದು ದಂತ ಕಥೆ’ ಸಿನಿಮಾ ಕುರಿತಾಗಿ ನಟ ಚೇತನ್ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ತೆಲುಗು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ಸಂದರ್ಭ ಸಂದರ್ಶನಗಾರರು, ‘ನೀವು ಚಿತ್ರದಲ್ಲಿ ಭೂತಾರಾಧನೆಯನ್ನು ತಿರುಚಿ ಪ್ರಸ್ತುತ ಪಡಿಸಿದ್ದೀರಿ ಎಂದು ಕರ್ನಾಟಕದ ನಟರೊಬ್ಬರು ಹೇಳಿದ್ದಾರೆ ಅದು ನಿಜವೇ?’ ಎಂದು ಪ್ರಶ್ನಿಸಿದ್ದು, ಇದಕ್ಕೆ ರಿಷಬ್, ’ಯಾರವರು, ಅವರು ಚೆನ್ನಾಗಿದ್ದಾರಾ? ಅವರೇನು ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಗಿ ನಗುತ್ತಲೇ ಮರು ಪ್ರಶ್ನೆ ಎಸೆದಿದ್ದು, ’ಈ ವಿಷಯದಲ್ಲಿ ನನ್ನದು ನೋ ಕಮೆಂಟ್ಸ್’ ಎಂದಿದ್ದಾರೆ.
ಇಂತಹಾ ವಿಚಾರಗಳಿಗೆ ಉತ್ತರಿಸುವ ಅವಶ್ಯಕತೆ ನನಗಿಲ್ಲ. ಖುದ್ದು ಆ ಸಂಸ್ಕೃತಿಯನ್ನು ಆರಾಧಿಸುವವರೇ ಇದನ್ನು ಒಪ್ಪಿದ್ದಾರೆ. ನಾನು ಈ ಸಿನಿಮಾ ಮಾಡಬೇಕಾದರೆ ಈ ಬಗ್ಗೆಯೂ ಜಾಗೃತ ವಹಿಸಿದ್ದೇನೆ. ಆ ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತಿರುವವರೇ ನನ್ನ ಜತೆ ಇದ್ದರು. ಅಷ್ಟೇ ಅಲ್ಲ, ನಾನೂ ಆ ಭಾಗದವನೇ, ಭೂತಾರಾಧನೆಯನ್ನು ನೋಡುತ್ತಾ ಬೆಳೆದವನೇ ಎಂದಿದ್ದಾರೆ ರಿಷಬ್.
ಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ಇದೆ. ಆದರೆ ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಸಿನಿಮಾದಲ್ಲಿ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆ ಎಂದು ನಟ ಚೇತನ್ ಟ್ವೀಟ್ ಮಾಡಿದ್ದರು.