370 ನೇ ವಿಧಿ ರದ್ದತಿ ಜಮ್ಮು-ಕಾಶ್ಮೀರದಲ್ಲಿ ಹೊಸತನದ ಯುಗ ಆರಂಭ: ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ ಭಯೋತ್ಪಾದನೆಯಿಂದಾಗಿ ಸಾವುನೋವುಗಳ ಪ್ರಮಾಣ ಶೇ. 70ರಷ್ಟು ಇಳಿಕೆಯಾಗಿದೆ. ಭಾರತೀಯ ಯುವಕರು ಭಯೋತ್ಪಾದಕರೊಂದಿಗೆ ಭಾಗಿಯಾಗಿರುವುದು ಬಹುತೇಕ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ಗೃಹ ಸಚಿವಾಲಯದ ಕಾರ್ಯವೈಖರಿಯ ಕುರಿತು ರಾಜ್ಯಸಭೆಯಲ್ಲಿ ಚರ್ಚೆಯ ಸಂದರ್ಭ ಮಾತನಾಡಿದ ಶಾ, ಯುಪಿಎ ಆಳ್ವಿಕೆಯಲ್ಲಿ ಸಾಮಾನ್ಯವಾಗಿದ್ದ ಭಯೋತ್ಪಾದಕ ಚಟುವಟಿಕೆಗಳು ಎನ್‌ಡಿಎ ಆಡಳಿತದಲ್ಲಿ ಕೊನೆಗೊಂಡಿದೆ ಎಂದು ಹೇಳಿದ್ದಾರೆ.

370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಮೋದಿ ಸರ್ಕಾರವು ಸಂವಿಧಾನ ರಚನಾಕಾರ ಅಂಬೇಡ್ಕರ್ ಅವರ ‘ಒಂದು ಸಂವಿಧಾನ, ಒಂದು ಧ್ವಜ’ದ ಕನಸನ್ನು ನನಸಾಗಿಸಿದೆ ಎಂದು ಅಮಿತ್ ಶಾ ಹೇಳಿದರು. “ಕಾಶ್ಮೀರದಲ್ಲಿ ಈಗ ಸಂಜೆಯ ಸಮಯದಲ್ಲಿ ಸಿನಿಮಾ ಮಂದಿರಗಳು ತೆರೆದಿರುತ್ತವೆ, ಜಿ 20 ಸಭೆ ನಡೆಯಿತು, ಮೊಹರಂ ಮೆರವಣಿಗೆ ನಡೆಯಿತು ಎಂದರು.

ಹತ್ತು ವರ್ಷಗಳ ಹಿಂದೆ, ಭಯೋತ್ಪಾದಕರ ಅಂತ್ಯಕ್ರಿಯೆಯ ಮೆರವಣಿಗೆಗಳು ಸಾಮಾನ್ಯವಾಗಿದ್ದವು, ಮತ್ತು ಜನರು ಅವರನ್ನು ವೈಭವೀಕರಿಸುತ್ತಿದ್ದರು. ಆದರೆ ಈಗ, ಭಯೋತ್ಪಾದಕರು ಕೊಲ್ಲಲ್ಪಟ್ಟಾಗ, ಅವರನ್ನು ಸ್ಥಳದಲ್ಲೇ ಸಮಾಧಿ ಮಾಡಲಾಗುತ್ತದೆ. ಒಂದು ಕಾಲದಲ್ಲಿ ಸರ್ಕಾರಿ ಸವಲತ್ತುಗಳನ್ನು ಅನುಭವಿಸುತ್ತಿದ್ದ ಅವರ ಸಂಬಂಧಿಕರನ್ನು ಈಗ ಸರ್ಕಾರಿ ಹುದ್ದೆಗಳಿಂದ ನಿರ್ದಯವಾಗಿ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು.

2004 ಮತ್ತು 2014 ರ ನಡುವೆ, ಈ ಪ್ರದೇಶದಲ್ಲಿ 7,217 ಭಯೋತ್ಪಾದಕ ಘಟನೆಗಳು ಕಂಡುಬಂದಿವೆ, ಆದರೆ 2014 ಮತ್ತು 2024 ರ ನಡುವೆ ಈ ಸಂಖ್ಯೆ 2,242 ಕ್ಕೆ ಇಳಿದಿದೆ ಎಂದು ಹೇಳಿದರು. ಮೋದಿ ಸರ್ಕಾರದ ಅಡಿಯಲ್ಲಿ ಭಯೋತ್ಪಾದನೆಯಿಂದಾಗಿ ಸಾವುಗಳು ಶೇಕಡಾ 70 ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಸಂವಿಧಾನವು ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ರಾಜ್ಯಗಳಿಗೆ ನೀಡಿದೆ. ಗಡಿ ಭದ್ರತೆ ಮತ್ತು ಆಂತರಿಕ ಭದ್ರತೆ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತವೆ. ಇದು ಸರಿಯಾದ ನಿರ್ಧಾರ. ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಅಗತ್ಯವಿಲ್ಲ. ಆದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ರಾಜ್ಯಗಳು ನೋಡಿಕೊಳ್ಳುವಾಗ, 76 ವರ್ಷಗಳ ನಂತರ ಹಲವಾರು ರೀತಿಯ ಅಪರಾಧಗಳು ರಾಜ್ಯ ಗಡಿಗಳಿಗೆ ಸೀಮಿತವಾಗಿರದೆ, ದೇಶದ ಹೊರಗಿನಿಂದಲೂ ಹಲವಾರು ಅಪರಾಧಗಳು ನಡೆಯುತ್ತವೆ. ಆದ್ದರಿಂದ, ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯದಲ್ಲಿ ಬದಲಾವಣೆಗಳನ್ನು ಮಾಡುವುದು ಅತ್ಯಗತ್ಯವಾಗುತ್ತದೆ. 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗೃಹ ಸಚಿವಾಲಯಕ್ಕೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ, ಭಯೋತ್ಪಾದಕ ದಾಳಿಯ ನಂತರ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ ಈಗ ಹಾಗಲ್ಲ ನಾವು ಸೇಡು ತೀರಿಸಿಕೊಳ್ಳುವುದೇ ಬಿಡುವುದಿಲ್ಲ. ಉರಿ ಮತ್ತು ಪುಲ್ವಾಮಾದಲ್ಲಿ ನಡೆದ ದಾಳಿಯ ನಂತರ ಭಾರತವು ಹತ್ತು ದಿನಗಳಲ್ಲಿ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಮತ್ತು ವಾಯುದಾಳಿಗಳನ್ನು ನಡೆಸಿ, ಬಲವಾದ ಸಂದೇಶವನ್ನು ರವಾನಿಸಿತು ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಯೋಗ ಮತ್ತು ಕೈಗಾರಿಕಾ ಹೂಡಿಕೆಯನ್ನು ಹೆಚ್ಚಿಸಲು ಮೋದಿ ಸರ್ಕಾರ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಮಾತನಾಡಿದ ಶಾ , 2019 ರಿಂದ 2024 ರವರೆಗೆ 40,000 ಸರ್ಕಾರಿ ಉದ್ಯೋಗಗಳನ್ನು ಒದಗಿಸಲಾಗಿದೆ ಮತ್ತು 1.51 ಲಕ್ಷ ಸ್ವ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಯುವಕರಿಗೆ ತರಬೇತಿ ನೀಡಲು ಕೌಶಲ್ಯ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ ಪ್ರಧಾನಿ ಮೋದಿ ಸರ್ಕಾರ ಭಾರತದ ಸಂವಿಧಾನ ನಿರ್ಮಾತೃಗಳ ಕನಸನ್ನು ನನಸಾಗಿಸಿದೆ ಎಂದು ಹೇಳಿದರು. ದೇಶವು ಒಬ್ಬ ಪ್ರಧಾನಿ, ಒಂದು ಸಂವಿಧಾನ ಮತ್ತು ಒಂದು ಧ್ವಜವನ್ನು ಮಾತ್ರ ಹೊಂದಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಈ ವೇಳೆ ದೇಶದ ಆಂತರಿಕ ಭದ್ರತೆ ಮತ್ತು ಗಡಿಗಳನ್ನು ಬಲಪಡಿಸಲು ಸರ್ವೋಚ್ಚ ತ್ಯಾಗ ಮಾಡಿದ ಸಾವಿರಾರು ರಾಜ್ಯ ಪೊಲೀಸರು ಮತ್ತು ಕೇಂದ್ರ ಅರೆಸೈನಿಕ ಪಡೆ ಯೋಧರಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!