ಹೊಸದಿಗಂತ ಜೇವರ್ಗಿ:
ಕಂದಾಯ ಇಲಾಖೆಯ ಕೆಲಸವೊಂದಕ್ಕೆ ಡಿಜಿಟಲ್ ಪೇಮೆಂಟ್ ಮೂಲಕ ಲಂಚ ಪಡೆಯುತ್ತಿದ್ದ ಸಿಬ್ಬಂದಿಯೊಬ್ಬರು ಈಗ ಲೋಕಾಯುಕ್ತ ಅತಿಥಿಯಾಗಿದ್ದಾರೆ. ತಾಲೂಕಿನ ಕಂದಾಯ ಇಲಾಖೆಯ ಸಿಬ್ಬಂದಿ ಸತೀಶ್ ಕುಮಾರ್ ರಾಠೋಡ್ ಎಂಬುವವರು ಶುಕ್ರವಾರ 10,000 ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಸತೀಶ್ ಕುಮಾರ್ ಅವರು ಸಂತ್ರಸ್ತರೊಬ್ಬರಿಂದ ಫೋನ್-ಪೇ (PhonePe) ಮೂಲಕ ಹಣ ಪಡೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಅರುಣ್ ಕುಮಾರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಪಟ್ಟಣದ ಮಿನಿ ವಿಧಾನಸೌಧದ ಎದುರುಗಡೆಯೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಸತೀಶ್ ಕುಮಾರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಕಲಬುರಗಿಗೆ ಕರೆದೊಯ್ಯಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಯಶಸ್ವಿ ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಮಾಜೀದ್, ಅಸ್ಲಾಂ ಕೊಡಚಿ, ಪ್ರಮೋದ್ ಮತ್ತು ರಾಣೋಜಿ ಪಾಲ್ಗೊಂಡಿದ್ದರು.


