ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ.
ಸಮನ್ವಿತಾ ಧಾರೇಶ್ವರ್ (33) ಮೃತ ಮಹಿಳೆ. ನ.8 ರಂದು ಈ ಘಟನೆ ನಡೆದಿದ್ದು ಪತಿ ಮತ್ತು 3 ವರ್ಷದ ಮಗನೊಂದಿಗೆ ಜರ್ಜ್ ಸೇಂಟ್ ಇನ ಹಾರ್ನ್‌ಸ್ಬಿ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರೊಂದು ಗುದ್ದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಅವರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆಗೆ ಈ ಕುಟುಂಬ ರಸ್ತೆ ದಾಟುತ್ತಿತ್ತು. ದಾರಿಯಲ್ಲಿ ಬರುತ್ತಿದ್ದ ಕಿಯಾ ಕಾರ್ನಿವಲ್ ಚಾಲಕ ಕಾರನ್ನು ನಿಲ್ಲಿಸಿ ಕುಟುಂಬಕ್ಕೆ ದಾರಿ ಮಾಡಿಕೊಟ್ಟಿದ್ದ. ಆದರೆ ಈ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ, ಕಿಯಾ ಕಾರು ಸಮನ್ವಿತಾ ಅವರಿಗೆ ಡಿಕ್ಕಿ ಹೊಡೆದಿದೆ. ಸಮನ್ವಿತಾ ಅವರನ್ನು ಕೂಡಲೇ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರಿಂದ ಅವರು ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.
ಸಮನ್ವಿತಾಗೆ ಒಂದು ವಾರದಲ್ಲಿ ಹೆರಿಗೆಯಾಗಲಿದೆ ಎಂದು ವೈದ್ಯರು ತಿಳಿಸಿದ್ದರು. ಅಪಘಾತದ ತೀವ್ರತೆಗೆ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

