ಸಾವಿರಾರು ವರ್ಷಗಳ ಹಿಂದಿನಿಂದ ಆರೋಗ್ಯ ಸಂರಕ್ಷಣೆಗೆ ಮಾರ್ಗದರ್ಶಿಯಾಗಿರುವ ಆಯುರ್ವೇದದಲ್ಲಿ ಕೆಲ ಆಹಾರ ಸಂಯೋಜನೆಗಳನ್ನು ಆರೋಗ್ಯದ ಶತ್ರು ಎಂದು ವರ್ಣಿಸಲಾಗಿದೆ. ಅವುಗಳಲ್ಲಿ ಕೆಲವು ತಕ್ಷಣದ ತೊಂದರೆ ನೀಡಿದ್ದರೂ, ಕೆಲವೊಂದು ಸಂಯೋಜನೆಗಳು ನಿಧಾನವಾಗಿ ಶರೀರವನ್ನು ಹಾನಿಗೊಳಿಸಿ ಜೀವಕ್ಕೂ ಅಪಾಯ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಮೀನಿನೊಂದಿಗೆ ಹಾಲು
ಆಯುರ್ವೇದದ ಪ್ರಕಾರ, ಮೀನಿನೊಂದಿಗೆ ಹಾಲು ಸೇವಿಸುವುದು ಅತ್ಯಂತ ಅಪಾಯಕಾರಿ ಸಂಯೋಜನೆಗಳಲ್ಲಿ ಒಂದು. ಈ ಎರಡು ಆಹಾರಗಳ ಗುಣಧರ್ಮ ಸಂಪೂರ್ಣ ಭಿನ್ನವಾಗಿದ್ದು, ಒಂದರ ತಾಪಮಾನದ ಸ್ವರೂಪ ‘ಬಿಸಿ’ ಆಗಿದ್ದರೆ ಮತ್ತೊಂದರದು ‘ಶೀತ’. ಈ ವಿರುದ್ಧ ಗುಣಧರ್ಮಗಳು ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟುಮಾಡಿ, ಚರ್ಮದ ಕಾಯಿಲೆ, ಉರಿ, ಆಲರ್ಜಿ ಅಥವಾ ದೀರ್ಘಕಾಲಿಕ ಪಿತ್ತ ದೋಷ ಉಂಟುಮಾಡಬಹುದು.
ಹಾಲು ಮತ್ತು ಹಣ್ಣು
ಹಾಲು ಮತ್ತು ಹಣ್ಣುಗಳ ಸಂಯೋಜನೆಯನ್ನು ಆಯುರ್ವೇದದಲ್ಲಿ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಹಾಲು ನೈಸರ್ಗಿಕವಾಗಿ ತಣ್ಣಗಿರುತ್ತದೆ ಮತ್ತು ಭಾರವಾಗಿರುತ್ತದೆ, ಆದರೆ ಅನೇಕ ಹಣ್ಣುಗಳು ಸಿಹಿ ಮತ್ತು ಆಮ್ಲೀಯವಾಗಿರುತ್ತವೆ. ಒಟ್ಟಿಗೆ ತಿಂದಾಗ ಇದು ಅಜೀರ್ಣ, ಅನಿಲ, ಕಫ ಶೇಖರಣೆ ಮತ್ತು ವಿಷದ ಶೇಖರಣೆಗೆ ಕಾರಣವಾಗಬಹುದು. ದೀರ್ಘಕಾಲೀನ ಸೇವನೆಯು ಚರ್ಮದ ಅಸ್ವಸ್ಥತೆಗಳು ಮತ್ತು ಉಸಿರಾಟದ ಸಮಸ್ಯೆಗಳಿಗೂ ಕಾರಣವಾಗಬಹುದು.
ತುಪ್ಪ ಮತ್ತು ಬೆಲ್ಲ ಅಥವಾ ತುಪ್ಪ ಮತ್ತು ಮೊಸರು:
ಇವು ಉಭಯವಿರೋಧ ಆಹಾರಗಳು. ಆಯುರ್ವೇದದ ಪ್ರಕಾರ ತುಪ್ಪ ‘ಉಷ್ಣ’ ಗುಣ ಹೊಂದಿದ್ದು, ಮೊಸರು ಅಥವಾ ಬೆಲ್ಲ ‘ಶೀತ’ ಸ್ವಭಾವದ್ದಾಗಿದೆ. ಇವು ಜೀರ್ಣ ಕ್ರಿಯೆಯಲ್ಲಿ ವ್ಯತಿರಿಕ್ತತ ಪರಿಣಾಮ ಉಂಟುಮಾಡುತ್ತವೆ.
ಜೇನು ತುಪ್ಪ ಮತ್ತು ಬೆಣ್ಣೆ ಅಥವಾ ತುಪ್ಪ:
ಜೇನು ತುಪ್ಪ ಉಷ್ಣ ಆಗಿದ್ದು, ತುಪ್ಪ ಶೀತ. ಒಂದೇ ಪ್ರಮಾಣದಲ್ಲಿ ಹಾಲು ಅಥವಾ ತುಪ್ಪದೊಂದಿಗೆ ಜೇನು ತುಪ್ಪ ಸೇವಿಸಿದರೆ ಪಿತ್ತ ಹೆಚ್ಚಾಗುತ್ತದೆ, ಶ್ವಾಸಕೋಶದ ತೊಂದರೆ ಉಂಟಾಗಬಹುದು.
ಆಯುರ್ವೇದ ತಜ್ಞರು ಎಚ್ಚರಿಕೆ ನೀಡುವಂತೆ, ಯಾವುದೇ ಆಹಾರವನ್ನು ಸೇವಿಸುವ ಮುನ್ನ ಅದರ ಸಂಯೋಜನೆ, ತೀವ್ರತೆ ಹಾಗೂ ತಿನ್ನುವ ಸಮಯದ ಕುರಿತು ಎಚ್ಚರಿಕೆಯಿಂದಿರಬೇಕು. ಸಧ್ಯದ ದಿನಗಳಲ್ಲಿ ಆರೋಗ್ಯಕರ ಅನ್ನಿಸುವ ಕೆಲ ಫ್ಯೂಷನ್ ಫುಡ್‌ಗಳೂ ಆಯುರ್ವೇದದ ದೃಷ್ಟಿಯಿಂದ ಹಾನಿಕಾರಕರಾಗಬಹುದು.
ಹೀಗಾಗಿ, ಆಯುರ್ವೇದದ ತತ್ವಗಳನ್ನು ಅರಿತು, ಪ್ರಾಚೀನ ಭಾರತೀಯ ಆಹಾರ ಸಂಸ್ಕೃತಿಯನ್ನು ಗೌರವಿಸಿ ಆಹಾರ ಸೇವನೆ ಮಾಡುವುದೇ ದೀರ್ಘಕಾಲಿಕ ಆರೋಗ್ಯದ ಗುಟ್ಟಾಗಿದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)