ಹೊಸ ದಿಗಂತ ವರದಿ, ಹುಬ್ಬಳ್ಳಿ:
ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುತ್ತಿದೆ. ಅದು ಜೀವನವೆಂಬ ಸುಸಂಸ್ಕೃತ ಶಿಕ್ಷಣ ನೀಡುವ ಮೂಲಕ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಮಂಗಳವಾರ ನವನಗರದ ಭಗಿನಿ ನಿವೇದಿತಾ ವಿದ್ಯಾಲಯದ ಆವರಣದಲ್ಲಿ ನೂತನ ಶಾಲಾ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಜವಾದ ಮನುಷತ್ವ ವಿದ್ಯೆಯಿಂದ ದೊರೆಯಲಿದೆ. ದೇಶದ ಮಣ್ಣಿನ ಅನುಗುಣವಾದ ಶಿಕ್ಷಣ ನೀಡಬೇಕು. ದೇಶದ್ಯಾಂತ 32 ಸಾವಿರ ವಿದ್ಯಾಭಾರತಿ ವಿದ್ಯಾಲಯಗಳು ಜೀವನದ ಶಿಕ್ಷಣ ನೀಡುವ ಮೂಲಕ ಉತ್ತಮ ವ್ಯಕ್ತಿ ನಿರ್ಮಾಣ ಮಾಡುತ್ತಿದೆ ಎಂದರು.
ಶಿಕ್ಷಣ ಹೇಗಿರಬೇಕು ಎಂದರೇ? ಕೇವಲ ಶಿಕ್ಷಿತರ ಹಾಗೂ ಸಾಕ್ಷರಸ್ಥರನ್ನು ಮಾಡುವುದಲ್ಲ ಸಂಸ್ಕಾರಯುತ ಶಿಕ್ಷಣ ನೀಡುವುದಾಗಿದೆ. ಇತ್ತೀಚೆಗೆ ದೇಶದಲ್ಲಿ ಭ್ರಷ್ಟಾಚಾರ ಮಾಡುತ್ತಿರುವರು ಶಿಕ್ಷಿತರೇ ಹೊರತು ಅಶಿಕ್ಷಿತರಲ್ಲ. ಇವರಿಗೆ ಅಕ್ಷರದ ಜ್ಞಾನ ಸಿಕ್ಕಿದೆ ನಿಜವಾದ ವಿದ್ಯೆ ದೊರೆತಿಲ್ಲ ಎಂದು ಹೇಳಿದರು.
ಭಗಿನಿ ನಿವೇದಿತಾ ವಿದ್ಯಾಲಯದ ನವನಗರದ ನಾಗರಿಕರಿಂದ ಆರಂಭವಾಗಿದೆ. ದಾನ ನೀಡಿದರ ಫಲವಾಗಿ ಆರಂಭವಾದ ಶಾಲೆ ಎಷ್ಟೋ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಯಾಗಿ ಮಾಡಿದೆ. ಈಗ ಹೊಸ ಕಟ್ಟಡ ನಿರ್ಮಾಣದತ್ತ ಸಾಗುತ್ತಿದ್ದು, ಅದು ದಾನಿಗಳ ಸಹಕಾರದಿಂದಲೇ ಆಗುತ್ತದೆ. ಕೊಡುವುದು ಭಾರತೀಯರ ರಕ್ತದಲ್ಲಿದೆ. ದಾನ ಹೃದಯವಂತಿಕೆ ಬೇಕು. ಸಂಘ ಮಾಡಿರುವ ಎಲ್ಲ ಚಟುವಟಿಕೆಗಳು ಸಮಾಜದಿಂದಲೇ ಎಂದರು.