Monday, December 22, 2025

ದೆಹಲಿ ವಾಯು ಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವಿಕೆ ಕಾರಣ ಎಂಬ ಆರೋಪ ತಪ್ಪು: ಸುಪ್ರೀಂ ಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ ವಾಯು ಮಾಲಿನ್ಯ ಚಳಿಗಾಲದ ತಿಂಗಳುಗಳಲ್ಲಿ ಮಾತ್ರ ಪಟ್ಟಿ ಮಾಡಬೇಕಾದ “ಸಾಂಪ್ರದಾಯಿಕ” ಪ್ರಕರಣವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಸುಪ್ರೀಂ ಪೀಠ, ಈ ಪಿಡುಗಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಪರಿಹಾರಗಳನ್ನು ಕಂಡುಹಿಡಿಯಲು ತಿಂಗಳಿಗೆ ಎರಡು ಬಾರಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ಜೊತೆಗೆ ಕೃಷಿ ತ್ಯಾಜ್ಯ ಸುಡುವ ವಿಷಯವು ಅನಗತ್ಯವಾಗಿ ರಾಜಕೀಯ ವಿಷಯ ಅಥವಾ ಅಹಂಕಾರದ ಸಮಸ್ಯೆಯಾಗಬಾರದು ಎಂದು ಎಚ್ಚರಿಸಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವಿಕೆಯು ಪ್ರಮುಖ ಕಾರಣವಾಗಿದೆ ಎಂಬ ಸಾಮಾನ್ಯ ಆರೋಪವನ್ನು ಪ್ರಶ್ನಿಸಿದ ಸಿಜೆಐ ಕಾಂತ್, “ಕೋವಿಡ್ ಸಮಯದಲ್ಲೂ ಕೃಷಿ ತ್ಯಾಜ್ಯ ಸುಡಲಾಗುತ್ತಿತ್ತು, ಆದರೂ ಜನ ಸ್ಪಷ್ಟವಾದ ನೀಲಿ ಆಕಾಶವನ್ನು ನೋಡುತ್ತಿದ್ದರು. ಇದು ಮಾಲಿನ್ಯಕ್ಕೆ ಇತರ ಅಂಶಗಳು ಕಾರಣ ಎಂದು ಸೂಚಿಸುತ್ತದೆ” ಎಂದರು.

“ಈ ನ್ಯಾಯಾಲಯದಲ್ಲಿ ವಿರಳವಾಗಿ ಪ್ರಾತಿನಿಧ್ಯ ಹೊಂದಿರುವ ಜನರ(ರೈತರ) ಮೇಲೆ ದೆಹಲಿ ಮಾಲಿನ್ಯದ ಹೊರೆಯನ್ನು ವರ್ಗಾಯಿಸುವುದು ತಪ್ಪಾಗಿರುವುದರಿಂದ ನಾವು ತ್ಯಾಜ್ಯ ಸುಡುವಿಕೆಯ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಸಿಜೆಐ ಹೇಳಿದರು.

ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳ ಕುರಿತು ಸ್ಪಷ್ಟತೆಯನ್ನು ಕೋರಿ, ವಾಯು ಗುಣಮಟ್ಟ ನಿರ್ವಹಣಾ ಆಯೋಗ(CAQM), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮತ್ತು ಇತರರಿಗೆ ವಾಯು ಮಾಲಿನ್ಯದ ಅಪಾಯವನ್ನು ನಿಭಾಯಿಸಲು ತೆಗೆದುಕೊಂಡ ಅಲ್ಪಾವಧಿ ಮತ್ತು ದೀರ್ಘಾವಧಿಯ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಜೆಐ ಸೂಚಿಸಿ, ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಿದರು.

error: Content is protected !!