ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಸಾವಿನ ಪ್ರಕರಣದಲ್ಲಿ ವಶಕ್ಕೆ ಪಡೆಯಲಾದ ವ್ಯಕ್ತಿಯ ವಿಚಾರಣೆ ವೇಳೆ, ಮಾನವೀಯತೆಯನ್ನು ಮೀರಿದ ಆಘಾತಕಾರಿ ವಿವರಗಳು ಹೊರಬಿದ್ದಿವೆ. ಡಿಸೆಂಬರ್ 10ರಂದು ನಡೆದ ಈ ಪ್ರಕರಣದ ಬಳಿಕ, ಮೂರು ಶವಗಳನ್ನು ಮನೆಯೊಳಗೆ ಹೂತು ಹಾಕಲಾಗಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಪೊಲೀಸರ ಮಾಹಿತಿಯಂತೆ, 33 ವರ್ಷದ ಫಾರೂಕ್ ಎಂಬ ಆರೋಪಿ ತನ್ನ ಪತ್ನಿ ತಾಹಿರಾ (32) ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವುದನ್ನು ತಪ್ಪೊಪ್ಪಿಕೊಂಡಿದ್ದಾನೆ. ದಾಂಪತ್ಯ ಜೀವನದಲ್ಲಿ ಉಂಟಾದ ಗಂಭೀರ ಕಲಹವೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿದೆ ಎಂದು ಆತ ಹೇಳಿದ್ದಾನೆ. ಮನೆಯ ಖರ್ಚು ವಿಚಾರವಾಗಿ ಪತ್ನಿಯೊಂದಿಗೆ ನಿರಂತರ ಜಗಳ ನಡೆಯುತ್ತಿತ್ತು ಜೊತೆಗೆ ಪತ್ನಿ ಬುರ್ಖಾ ಧರಿಸದೆ ಮನೆಯಿಂದ ಹೊರ ಹೋಗಿದ್ದಕ್ಕೆ ಕೊಲೆ ಮಾಡಿರುವುದಾಗಿ ಫಾರೂಕ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ನಡುವೆಯೇ, ಪತ್ನಿಯ ನಡೆನುಡಿಗೆ ಸಂಬಂಧಿಸಿದ ಅಸಮಾಧಾನವೂ ಹೆಚ್ಚಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 10ರ ರಾತ್ರಿ ಹೆತ್ತವರನ್ನು ನೋಡಿ ಬರಲು ಹೋಗಿದ್ದ ಪತ್ನಿ ಮನೆಗೆ ವಾಪಸ್ಸಾದ ಬಳಿಕ, ಕೋಪಾವೇಶದಲ್ಲಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎನ್ನಲಾಗಿದೆ. ಈ ದೃಶ್ಯವನ್ನು ಕಂಡ ಮಕ್ಕಳು ಭಯದಿಂದ ಕಿರುಚಿದ್ದರಿಂದ, ಅವರನ್ನು ಕೂಡ ಕೊಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಬಳಿಕ, ಪತ್ತೆಯಾಗದಂತೆ ಮೂವರ ಶವಗಳನ್ನು ಮನೆಯೊಳಗೇ ಹೂತು ಹಾಕಿದ್ದಾನೆ.
ಶವಗಳನ್ನು ಹೊರತೆಗೆದ ವೇಳೆ ಮಕ್ಕಳ ದೇಹಗಳ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಸ್ಥಳದಿಂದ ರಕ್ತದ ಕಲೆಗಳಿರುವ ಮರದ ಕೋಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಈ ಘಟನೆ ಸಮಾಜದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

