ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ಭವಾನಿ ರೇವಣ್ಣ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಅನ್ನುನ್ಯಾಯಾಲಯವು ಮೇ 31ರವರೆಗೆ ಕಾಯ್ದಿರಿಸಿದೆ.
ಮೇ 31ರಂದು ನ್ಯಾಯಾಲಯವು ಆದೇಶ ಹೊರಡಿಸಿದ್ದು, ಅಲ್ಲಿಯವರೆಗೆ ಭವಾನಿ ರೇವಣ್ಣ ಕಾಯಬೇಕಿದೆ.
ಇನ್ನು, ಮೇ 31ರಂದು ಆಗಮಿಸಲಿರುವ ಪ್ರಜ್ವಲ್ ರೇವಣ್ಣ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನೂ ಮೇ 31ಕ್ಕೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ. ಹಾಗಾಗಿ, ಮೇ 31 ತಾಯಿ-ಮಗನಿಗೆ ಪ್ರಮುಖ ದಿನವಾಗಿದೆ.
ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಂದೇಶ ಚೌಟ, ‘ಎಫ್ಐಆರ್ ದಾಖಲಿಸಿ 27 ದಿನಗಳಾದರೂ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಇದುವರೆಗೂ ಏಕೆ ವಿಚಾರಣೆಗೆ ಕರೆಯಲಿಲ್ಲ? ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು’ ಎಂದರು.
ಎಸ್‌ಪಿಪಿ ವಾದವೇನಿತ್ತು?
ಮಗನ ರಕ್ಷಣೆಗಾಗಿ ಭವಾನಿ ರೇವಣ್ಣ ಒಳಸಂಚು ರೂಪಿಸಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣದ ಹಿಂದೆ ಇವರ ಕೈವಾಡವಿದೆ. ಸಂತ್ರಸ್ತ ಮಹಿಳೆಗೆ ಊಟ ನೀರು, ಸರಿಯಾಗಿ ಕೊಟ್ಟಿಲ್ಲ. ಆಕೆಗೆ ಬಟ್ಟೆ ಸೀರೆಯನ್ನು ಕೊಟ್ಟಿಲ್ಲ. ಆರೋಪಿ ಸತೀಶ್ ಬಾಬಣ್ಣ ಜತೆ ಭವಾನಿ ಮಾತನಾಡಿದ್ದಾರೆ. ಆರೋಪಿ ಸತೀಶ್ ಬಾಬಣ್ಣ ಕೇಳಿದಾಗ ಭವಾನಿಯವರು ಆಯ್ತು 150 ರೂಪಾಯಿ ಅಥವಾ 200 ರೂಪಾಯಿ ಸೀರೆ ಕೊಡ್ಸು ಎಂಬುದಾಗಿ ಸೂಚಿಸಿದ್ದಾರೆ” ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು. ಕೊನೆಗೆ ನ್ಯಾಯಾಲಯವು ತೀರ್ಪನ್ನು ಮೇ 31ರವರೆಗೆ ಕಾಯ್ದಿರಿಸಿತು.
ಪ್ರಜ್ವಲ್ ರೇವಣ್ಣ ಅವರು ಮೇ 31ರಂದು ಭಾರತಕ್ಕೆ ಆಗಮಿಸಲಿದ್ದು, ನಾಳೆ ಅಂದರೆ ಮೇ 30ರಂದೇ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು ಎಂದು ವಕೀಲ ಅರುಣ್ ಮನವಿ ಮಾಡಿದ್ದಾರೆ. ಆದರೆ, ನಾಳೆಯೇ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ಈ ಕುರಿತು ಪ್ರತಿಕ್ರಿಯಿಸುವಂತೆ ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿದೆ.