March 12, 2026
Thursday, March 12, 2026
spot_img

ತಂಗಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಜೋಡಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್‌

ಹೊಸದಿಗಂತ ವರದಿ ಮಡಿಕೇರಿ:

ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಚೇರಿ ಗ್ರಾಮದಲ್ಲಿ ಬುಧವಾರ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಚೇರಿ ನಿವಾಸಿ ಹೆಚ್.ಕೆ.ಚಂದು (64) ಎಂಬಾತನೇ ಬಂಧನಕ್ಕೊಳಗಾದ ಆರೋಪಿಯಾಗಿದ್ದು, ತನ್ನ ತಂಗಿಗೆ ಇದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ತಿಳಿಸಿದ್ದಾರೆ.

ಕುಂದಚೇರಿ ಗ್ರಾಮದ ಅಡಿಯರ ಯಶೋದಾ (45) ಹಾಗೂ ಕುಂಞಿರಾಮ (47) ಎಂಬವರ ನಡುವೆ ಕಳೆದ ಎರಡು ವರ್ಷಗಳಿಂದ‌ ಅನೈತಿಕ‌ ಸಂಬಂಧವಿತ್ತೆಂದು ಹೇಳಲಾಗಿದ್ದು, ಈ ಸಂಬಂಧ ಯಶೋದಾಳ ಅಣ್ಣ ಚಂದುವಿಗೆ ಅಸಮಾಧಾನವಿತ್ತೆನ್ನಲಾಗಿದೆ.
ಬುಧವಾರ ಸಂಜೆ ಈ ವಿಚಾರವಾಗಿ ಚಂದ್ರು ತನ್ನ ತಂಗಿ ಯಶೋದಾ ಹಾಗೂ ಕುಂಞಿರಾಮ ಅವರೊಂದಿಗೆ ಜಗಳವಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ಚಂದ್ರು ಕತ್ತಿಯಿಂದ ಕಡಿದು ಇಬ್ಬರನ್ನೂ ಕೊಲೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.



ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಮಡಿಕೇರಿ ವಿಭಾಗದ ಡಿಎಸ್ಪಿ ಪಿ.ಎ.ಸೂರಜ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಠಾಣಾಧಿಕಾರಿ ಪಿ.ಜಿ.ರಾಘವೇಂದ್ರ, ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕು. ಬಿಂದುಮಣಿ ಆರ್.ಎನ್ ಅವರು ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !