‘ವಂಶಿಕಾ’ ಹೆಸರು ಬಳಸಿ ಮೋಸದ ಆರೋಪ: ಆರೋಪಿ ಮಹಿಳೆ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟ ಆನಂದ್ ಪುತ್ರಿ ಹೆಸರು ಬಳಸಿ ಹಣ ವಂಚನೆ ಎಸಗಿದ ಆರೋಪದಡಿ ನಿಶಾ ನರಸಿಂಹಪ್ಪ ಎಂಬುವರನ್ನ ಸದಾಶಿವನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿದ್ಯಾರಣ್ಯಪುರ ನಿವಾಸಿಯಾಗಿರುವ ನಿಶಾ ವಿರುದ್ಧ ನಟ ಆನಂದ್ ಪತ್ನಿ ಯಶಸ್ವಿನಿ ದೂರು ನೀಡಿದ ಮೇರೆಗೆ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು‌.

ವಿಚಾರಣೆ ವೇಳೆ ವಂಚನೆ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಯನ್ನ ಜೈಲಿಗೆ ಕಳುಹಿಸಲಾಗಿದೆ . ಕಳೆದ‌ ನಾಲ್ಕು ವರ್ಷಗಳಿಂದ ಈವೆಂಟ್ ಮ್ಯಾನೇಜ್​ಮೆಂಟ್ ಕೆಲಸ‌ ಮಾಡುತ್ತಿದ್ದ ನಿಶಾ, ಎನ್​ಎನ್‌ ಪ್ರೊಡಕ್ಷನ್ ಕಂಪನಿ ಸಂಸ್ಥಾಪಕಿಯಾಗಿದ್ದರು. ರಿಯಾಲಿಟಿ ಶೋ ವಿಜೇತೆಯಾಗಿದ್ದ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ಆಯಕ್ಟಿಂಗ್ ಕ್ಲಾಸ್, ಟ್ಯಾಲೆಂಟ್ ಶೋ ಹಾಗೂ ಖಾಸಗಿ ಚಾನೆಲ್​ನಲ್ಲಿ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಪೋಷಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

ಅಲ್ಲದೇ ಮಕ್ಕಳಿಗೆ ಮಿಸ್ ಇಂಡಿಯಾ, ಮಿಸ್ಟರ್ ಇಂಡಿಯಾ ಮಾಡುವುದಾಗಿ ಯುವ ಜನರಿಂದ ಹಣ ಪಡೆದಿದ್ದಾರೆ. ಈವೆಂಟ್ ಮ್ಯಾನೇಜ್ ಮೆಂಟ್ ಮಾಡುವುದಾಗಿ ಸಾರ್ವಜನಿಕರಿಂದ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು‌. ನಿನ್ನೆ ಯಶಸ್ವಿನಿ ನೀಡಿದ ದೂರಿನ‌ ಮೇರೆಗೆ ನಿಶಾಳನ್ನ ಬಂಧಿಸಲಾಗಿದ್ದು, ಜೊತೆಗೆ ಹಣ ಕಳೆದುಕೊಂಡ 17 ಮಂದಿ ಪೋಷಕರು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೋಷಕರ ವಿರುದ್ಧ ಪ್ರತಿ ದೂರು ನೀಡಿದ್ದ ಆರೋಪಿ ಮಹಿಳೆ
ಮತ್ತೊಂದೆಡೆ ಫೋಟೊ ಶೂಟ್ ಆರ್ಡರ್ ಕೊಡೋದಾಗಿ ನಿಶಾ ನರಸಪ್ಪ ಅವರನ್ನು ಕಾಫಿ ಡೇ ಗೆ ಪೋಷಕರು ಕರೆಸಿದ್ದರು. ಆ ಬಳಿಕ ಸದಾಶಿವನಗರ ಪೊಲೀಸರಿಗೆ ನಿಶಾರನ್ನು ಒಪ್ಪಿಸಿದ್ದು, ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.‌ ಈ ವೇಳೆ ಪೋಷಕರ ವಿರುದ್ಧವೂ‌ ನಿಶಾ ಪ್ರತಿದೂರು ನೀಡಿದ್ದರು. ಕಾಫಿ ಶಾಪ್​ನಲ್ಲಿ ಪೋಷಕರು ನನ್ನ ಮೇಲೆ ಗಲಾಟೆ ಮಾಡಿದ್ದಾರೆ. ನಾನು ಯಾರಿಗೂ ಮೋಸ ಮಾಡಿಲ್ಲ. ಹಣ ಕೊಡುವುದು ತಡವಾಗಿದೆ ಎಂದು ಪ್ರತಿದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!