ಹೊಸದಿಗಂತ ವರದಿ, ಚಿತ್ರದುರ್ಗ
ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿ ಪೊಲೀಸರ ಕಣ್ಣುತಪ್ಪಿಸಿ ಬಂದು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಆರೋಪಿಯೊಬ್ಬನನ್ನು ಪತ್ತೆ ಮಾಡಿದ ಪೊಲೀಸರು ಮರಳಿ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಗೋನೂರು ಗ್ರಾಮದ ಹೋ.ಚಿ.ಬೋರಯ್ಯ ಬಡಾವಣೆಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ಹೈದರಾಬಾದ್‌ನ ರಾಜೇಂದ್ರ ನಗರದ ನಿವಾಸಿ ಪ್ಯಾರಲ ವಂಶಿ ಬಂಧಿತ ಆರೋಪಿ. ಈತ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ೧೮ ತಿಂಗಳು ಸೆರೆವಾಸ ಅನುಭವಿಸಿದ್ದ. ಈತನ ತಾತ ಇವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿ ಮನೆಗೆ ಕರೆತಂದಿದ್ದರು. ಒಂದು ತಿಂಗಳು ಮನೆಯಲ್ಲಿದ್ದ ಈತ ಮತ್ತೆ ಹಳೆ ಚಾಳಿ ನೆನಪಿಸಿಕೊಂಡು ಮನೆಯಿಂದ ಕಾಲ್ಕಿತ್ತಿದ್ದ.
ಹೀಗೆ ಮನೆಯಿಂದ ಹೊರಬಂದ ವಂಶಿ ಸುಮಾರು ಎರಡು ವರ್ಷಗಳ ಕಾಲ ಬಾಗೇಪಲ್ಲಿ ಟೋಲ್‌ನಲ್ಲಿ ಪಂಜಾಬಿ ಡ್ರೆಸ್ ಹಾಕಿಕೊಂಡು ಮಂಗಳಮುಖಿಯರ ಜೊತೆ ಭಿಕ್ಷೆ ಬೇಡುತ್ತಿದ್ದ. ಹೀಗೆ ಭಿಕ್ಷೆ ಬೇಡಿ ಪ್ರತಿದಿನ ೩೦೦೦ ರಿಂದ ೪೦೦೦ ರೂ. ಕಲೆಕ್ಷನ್ ಮಾಡಿ ಮುಂಗಳಮುಖಿಯರ ಗುಂಪಿನ ಲೀಡರ್‌ಗೆ ಕೊಡುತ್ತಿದ್ದ. ಒಂದು ದಿನ ತಾನು ವಿವಿಧ ಪ್ರಕರಣಗಳಲ್ಲಿ ಆರೋಪಿತನಾಗಿದ್ದು, ಪೊಲೀಸರು ನನ್ನನ್ನು ಹುಡುಕುತ್ತಿದ್ದಾರೆ ಎಂದು ಮಂಗಳಮುಖಿಯರಿಗೆ ತಿಳಿಸಿದ್ದಾನೆ. ಇದರಿಂದ ಗಾಬರಿಗೊಂಡ ಮಂಗಳಮುಖೀಯರು ಈತನ ಕೈಗೆ ೪೦೦೦ ರೂ. ಕೊಟ್ಟು ಅಲ್ಲಿಂದ ಹೋಗುವಂತೆ ತಿಳಿಸಿದ್ದಾರೆ.
ಹೀಗೆ ಹೊರಟವನು ಆ ಹಣದಲ್ಲಿ ಅಲ್ಲಿ ಇಲ್ಲಿ ತಿಂದು ಕುಡಿದು ದಿನ ಕಳೆಯುತ್ತಿದ್ದ. ಒಂದು ದಿನ ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಹೊಸ ಹೈವೇಯಲ್ಲಿ ನಡೆದು ಹೋಗುತ್ತಿರುವಾಗ ಯಾರೋ ಸಾರ್ವಜನಿಕರು ನೋಡಿ ನಿರಾಶ್ರಿತರ ಕೇಂದ್ರಕ್ಕೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ ನಿರಾಶ್ರಿತರ ಕೇಂದ್ರದ ಸಿಬ್ಬಂದಿ ಆತನನ್ನು ಕರೆದೊಯ್ದು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿದ್ದಾರೆ. ಕೆಲ ದಿನಗಳ ನಂತರ ನಿರಾಶ್ರಿತರ ಕೇಂದ್ರದ ಸಿಬ್ಬಂದಿಗೆ ತನ್ನ ವೃತ್ತಾಂತವನ್ನು ತಿಳಿಸಿದ್ದಾನೆ. ಇವನಿಂದ ಮಾಹಿತಿ ಪಡೆದ ಸಿಬ್ಬಂದಿ ತೆಲಂಗಾಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ನಿರಾಶ್ರಿತರ ಕೇಂದ್ರದ ಸಿಬ್ಬಂದಿಯಿಂದ ಮಾಹಿತಿ ಪಡೆದ ಪೊಲೀಸರು ಗೂನೂರು ಬಳಿಯ ಹೋ.ಚಿ.ಬೋರಯ್ಯ ಬಡಾವಣೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು ತೆಲಂಗಾಣಕ್ಕೆ ಕರೆದೊಯದಿದ್ದಾರೆ. ನಿರಾಶ್ರಿತರ ಕೇಂದ್ರದ ಮುಖ್ಯಸ್ಥರಾದ ಮಹದೇವಯ್ಯ ಹಾಗೂ ಸಿಬ್ಬಂದಿ ವರ್ಗದವರು ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಮುಂದಿನ ಕಾನೂನು ಪ್ರಕ್ರಿಯೆಗೆ ಸಹಕರಿಸಿದ್ದಾರೆ. ನಿರಾಶ್ರಿತರ ಕೇಂದ್ರದ ಸಿಬ್ಬಂದಿ ಕುರಿತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.