March 16, 2026
Monday, March 16, 2026
spot_img

ಬೇರೆಯವರ ಆಧಾರ್‌ ಬಳಸಿ ಕೆಲಸಕ್ಕೆ ಸೇರಿ ಲಕ್ಷ ಲಕ್ಷ ಕದ್ದ ಆರೋಪಿ ಅರೆಸ್ಟ್‌, ಚಿನ್ನಾಭರಣ ವಶಕ್ಕೆ

ಹೊಸದಿಗಂತ ವರದಿ ಮಡಿಕೇರಿ:

ಬೇರೊಬ್ಬರ ಆಧಾರ್ ಕಾರ್ಡ್ ಬಳಸಿ ಹೋಂನರ್ಸಿಂಗ್ ಕೆಲಸಕ್ಕೆ ಸೇರಿದ್ದಲ್ಲದೆ, ತಾನು ಕೆಲಸ ಮಾಡುತ್ತಿದ್ದ ಮನೆಯಿಂದ 5.50ಲಕ್ಷ ರೂ.ನಗದು ಹಾಗೂ 80 ಗ್ರಾಂ ಚಿನ್ನಾಭರಣ ಅಪಹರಿಸಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ (27) ಎಂಬಾತನೇ ಪೊಲೀಸರ ಅತಿಥಿಯಾದ ಆರೋಪಿ.

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಎಫ್‌ಎಂಸಿ ಕಾಲೇಜು ಹಿಂಭಾಗದ ಬಡಾವಣೆಯಲ್ಲಿ ವಾಸವಿದ್ದ ಡಾ.ಪಾರ್ಥಸಾರಥಿ ಎಂಬವರ ಅಣ್ಣ ವಯೋವೃದ್ಧರಾಗಿದ್ದು ಅವರನ್ನು ನೋಡಿಕೊಳ್ಳುವ ಸಲುವಾಗಿ ಹೋಂ ನರ್ಸಿಂಗ್ (Care Taker) ಕೆಲಸಕ್ಕಾಗಿ ಕೊಪ್ಪಳ ಜಿಲ್ಲೆ ಮೂಲದ ಮಹಂತೇಶ ಪೂಜಾರ ಎಂಬಾತನನ್ನು ನೇಮಿಸಲಾಗಿತ್ತು.

ಫೆ.28ರಂದು ಈತ ಮನೆಯಲ್ಲಿದ್ದ ಅಂದಾಜು 80 ಗ್ರಾಂ ತೂಕದ ಚಿನ್ನಾಭರಣ ಹಾಗೂ ರೂ. 5,50,000/- ನಗದು ಕಳವು ಮಾಡಿರುವ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 306 ಬಿಎನ್‌ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಹಿರಿಯ ಅಧಿಕಾರಿಗಳು ಹಾಗೂ ವೃತ್ತ ಮಟ್ಟದ ಅಪರಾಧ ಕೃತ್ಯ ಪರಿಶೀಲನಾ ತಜ್ಞರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ನಡೆಸಿದಾಗ,ಆರೋಪಿ ಭದ್ರಪ್ಪ ಬಸಪ್ಪ ಹಡಪದ, ಮಹಾಂತೇಶ ಪೂಜಾರ ಎಂಬವರ ಆಧಾರ್ ಕಾರ್ಡ್‌ ಪ್ರತಿಯನ್ನು ಬಳಸಿ ಹೋಂ ನರ್ಸಿಂಗ್ ಕೆಲಸಕ್ಕೆ ಸೇರಿರುವುದು ಹಾಗೂ 2025ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಕೆ.ಟಿ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಅಲ್ಲದೆ ಆತನಿಂದ 5,09,000/ನಗದು, 137 ಗ್ರಾಂ ಚಿನ್ನಾಭರಣ ಹಾಗೂ ಒಂದು ಮೊಬೈಲ್’ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ತಿಳಿಸಿದ್ದಾರೆ.

ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್.ಪಿ.ಎ, ಮಡಿಕೇರಿ ನಗರ ವೃತ್ತ ಸಿಪಿಐ ರಾಜು.ಪಿ.ಕೆ, ಬೆರಳು ಮುದ್ರೆ ಘಟಕದ ಪಿಐ ರಾಮಕೃಷ್ಣ, ಮಡಿಕೇರಿ ನಗರ ಠಾಣೆ ಪಿಎಸ್ ಐ ಅನ್ನಪೂರ್ಣ.ಎಸ್.ಎಸ್, ಎ.ಎಸ್ ಐ ರಾಮಪ್ಪ ಸಿಬ್ಬಂದಿಗಳಾದ ಪ್ರಭಾಕರ್, ಗಿರೀಶ್, ಕಿರಣ್‌, ಕೃಷ್ಣಮೂರ್ತಿ, ಸುಧೀರ್, ಮುನೀರ್, ರಂಜಿತ್, ಪ್ರದೀಪ್, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಶರತ್ ರೈ, ಫಾರೆನ್ಸಿಕ್ ವಿಭಾಗದ ಜಯಕುಮಾರ್, ಸಂತೋಷ್ ಹಾಗೂ ಡಿಸಿಆರ್‌ಬಿ ವಿಭಾಗದ ಪ್ರವೀಣ್ ಮತ್ತು ನಿರಂಜನ್ ಅವರುಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದು, ಅವರ ಕಾರ್ಯವನ್ನು ಎಸ್ಪಿ ಬಿಂದುಮಣಿ ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !