- ಮಹಾಂತೇಶ ಕಣವಿ
ಧಾರವಾಡ: ಸರ್ಕಾರಿ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ ಎಂಬ ಮಾತು ಅಕ್ಷರಶಃ ಸತ್ಯ. ಇದಕ್ಕೆ ಧಾರವಾಡ ಜಿಲ್ಲಾಸ್ಪತ್ರೆ ತಾಜಾ ಉದಾಹರಣೆಯಾಗಿದೆ.
ಧಾರವಾಡ ಜಿಲ್ಲಾಸ್ಪತ್ರೆ ವೈದ್ಯರು, ಆಸ್ಪತ್ರೆಯಲ್ಲಿರುವ ಸೌಲಭ್ಯ ಸದ್ಬಳಸಿ, ‘ಹಿಪ್ ಅರ್ಥರೈಟಿಸ್’ ರೋಗದಿಂದ ನಡೆಯಲಾಗದೆ, ಬಳಲುತ್ತಿದ್ದ 42 ವರ್ಷದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರೋಗಕ್ಕೆ ಕಾರಣ:
ಅತಿಯಾದ ಮಧ್ಯಪಾನ ಹಾಗೂ ಧೂಮಪಾನ ಕಾರಣದಿಂದ ತೇಜಸ್ವಿ ನಗರದ ನಿವಾಸಿ ಅಂಬರೀಶ ಕವಡಿ ಎಂಬ ವ್ಯಕ್ತಿ ಕಳೆದ ನಾಲ್ಕೈದು ವರ್ಷಗಳಿಂದ ‘ಹಿಪ್ ಅರ್ಥರೈಟಿಸ್’ (ಸೊಂಟ ಸವಕಳಿ) ರೋಗದಿಂದ ಬಳಲುತ್ತಿದ್ದರು.
ಆರ್ಥಿಕ ಸಂಕಷ್ಟ:
ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ರೂ.2.50 ಲಕ್ಷ ತಗಲುತ್ತದೆ. ಹಣಕಾಸಿನ ತೊಂದರೆ ಕಾರಣಕ್ಕೆ ಅಂಬರೀಶ ಅಷ್ಟೊಂದು ಹಣ ಭರಿಸಿ, ಚಿಕಿತ್ಸೆ ಪಡೆಯುವ ಶಕ್ತಿಯೂ ಹೊಂದಿರಲಿಲ್ಲ. ಹೀಗಾಗಿ ಜಿಲ್ಲಾಸ್ಪತ್ರೆ ವೈದ್ಯರ ಮೊರೆ ಹೋಗಿದ್ದಾರೆ.
ಚಿಕಿತ್ಸೆ ಯಶಸ್ವಿ:
ಡಿ.2ರಂದು ಆಸ್ಪತ್ರೆಗೆ ದಾಖಲಾದ ಅಂಬರೀಶಗೆ ಎರಡು ದಿನಗಳು ಉಪಚಾರ ಮಾಡಿದ ಬಳಿಕ ಡಿ.4ರಂದು ‘ಹಿಪ್ ಜಾಯಿಂಟ್ ರಿಪ್ಲೀಸ್‌ಮೆಂಟ್’ (ಸೊಂಟ ಕೀಲು ಬದಲೀಕರಣ) ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾವಿ ಮಾರ್ಗದರ್ಶನದಲ್ಲಿ ಡಾ.ಶಿವಪ್ರಸಾದ ಭಟ್ಟ, ಡಾ.ಶ್ರೀನಿವಾಸಲು, ಡಾ.ಸಂತೋಷ ಹಾಗೂ ತಜ್ಞ ವೈದ್ಯರು ನಿರಂತರ 2 ಗಂಟೆಗಳು ಕೈಗೊಂಡ ಶಸ್ತ್ರ ಚಿಕಿತ್ಸೆ ಫಲಕಾರಿಯಾಗಿದೆ.
ಮೊದಲ ಶಸ್ತ್ರ ಚಿಕಿತ್ಸೆ:
ಇದು ರಾಜ್ಯದ ಮೊದಲ ಯಶಸ್ವಿ ಶಸ್ತ್ರ ಚಿಕಿತ್ಸೆ. ಅದರಲ್ಲೂ ಧಾರವಾಡ ಜಿಲ್ಲಾಸ್ಪತ್ರೆ ಎಲಬು-ಕೀಲು ವಿಭಾಗದ ಮೊದಲ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿರುವ ಕೀರ್ತಿಗೂ ಧಾರವಾಡದ ವೈದ್ಯರು ಭಾಜನರಾಗಿದ್ದು ವಿಶೇಷ ಮತ್ತು ವಿರಳ.
ಜಿಲ್ಲಾಸ್ಪತ್ರೆ ಅಪವಾದ:
ಸರ್ಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ಉಪಕರಣಗಳು ಹಾಗೂ ಸೌಲಭ್ಯಗಳ ಕೊರತೆ, ವೈದ್ಯರ ನಿರ್ಲಕ್ಷ್ಯಕ್ಕೆ ಸಾವು ಸಂಭವಿಸಿತೆಂಬ ಮಾತು ಸಾರ್ವಜನಿಕ ವಲಯದಲ್ಲಿ ಸಾಮಾನ್ಯ. ಇದಕ್ಕೆ ಧಾರವಾಡ ಜಿಲ್ಲಾಸ್ಪತ್ರೆ ಅಪವಾದ ಎಂಬತಿದೆ.